ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 30 ದಿನಗಳ ಎಲ್‌ಪಿಜಿ ಸಂಗ್ರಹಕ್ಕೆ ಕೇಂದ್ರ ಸೂಚನೆ

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಪರಿಣಾಮ ಆಯಕಟ್ಟಿನ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿ (Strait of Hormuz) ಬಂದ್ ಆಗಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕನಿಷ್ಠ 30 ದಿನಗಳ ಬೇಡಿಕೆಗೆ ಸಾಕಾಗುವಷ್ಟು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಂಗ್ರಹ ಸಾಮರ್ಥ್ಯ ಹೊಂದುವಂತೆ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಸೂಚನೆ ನೀಡಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಂಸ್ಥೆಗಳು ತಮ್ಮ ಸಾಮಾನ್ಯ ವಾಣಿಜ್ಯ ದಾಸ್ತಾನುಗಳನ್ನು ಮೀರಿ ಹೆಚ್ಚುವರಿ ಎಲ್‌ಪಿಜಿ ಸಂಗ್ರಹ ವ್ಯವಸ್ಥೆ ಕಲ್ಪಿಸುವ ಯೋಜನೆಗಳನ್ನು ರೂಪಿಸಲು ನಿರ್ದೇಶನ ನೀಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, “ದೇಶದ ಇಂಧನ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯತಂತ್ರದ ನಿಕ್ಷೇಪಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಕನಿಷ್ಠ 30 ದಿನಗಳ ಎಲ್‌ಪಿಜಿ ಸಂಗ್ರಹ ಹೊಂದುವ ಯೋಜನೆ ರೂಪಿಸುತ್ತಿದ್ದು, ಅದರ ಅನುಷ್ಠಾನ ಪ್ರಗತಿಯಲ್ಲಿದೆ” ಎಂದು ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಪರಿಸ್ಥಿತಿಯಿಂದ ಜಾಗತಿಕ ಇಂಧನ ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಿದ್ದು, ಭಾರತದ ಶೇ.40ರಷ್ಟು ಕಚ್ಚಾ ತೈಲ ಆಮದು, ಶೇ.65ರಷ್ಟು ನೈಸರ್ಗಿಕ ಅನಿಲ ಹಾಗೂ ಶೇ.90ರಷ್ಟು ಎಲ್‌ಪಿಜಿ ಪೂರೈಕೆ ಗಲ್ಫ್ ರಾಷ್ಟ್ರಗಳ ಮೇಲೆ ಅವಲಂಬಿತವಾಗಿದೆ. ಮೂರು ತಿಂಗಳಿಗೂ ಅಧಿಕ ಕಾಲ ಸಂಘರ್ಷ ಮುಂದುವರಿದಿರುವುದರಿಂದ ಇಂಧನ ಪೂರೈಕೆಗೆ ಅಡಚಣೆ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ದೇಶದ ಕಚ್ಚಾ ತೈಲ ಸಂಗ್ರಹ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ಕಾರ್ಯವೂ ನಡೆಯುತ್ತಿದೆ ಎಂದು ಸುಜಾತಾ ಶರ್ಮಾ ತಿಳಿಸಿದ್ದಾರೆ.

ಆದರೆ ದೇಶದಲ್ಲಿ ಸದ್ಯ ಯಾವುದೇ ಇಂಧನ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲದ ಸಮರ್ಪಕ ದಾಸ್ತಾನು ಲಭ್ಯವಿದ್ದು, ಸಂಸ್ಕರಣಾಗಾರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜೊತೆಗೆ, ಎಲ್‌ಪಿಜಿ ಉತ್ಪಾದನೆ ದಿನಕ್ಕೆ ಸುಮಾರು 52 ಸಾವಿರ ಟನ್‌ಗಳಷ್ಟು ದಾಖಲೆಯ ಮಟ್ಟ ತಲುಪಿದ್ದು, ದೇಶದ ಅಗತ್ಯಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!