ಶತಮಾನೋತ್ಸವ ಕಂಡ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಬೊಳಂತೂರು ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ: ಶಿಕ್ಷಣದೊಂದಿಗೆ ಆರೋಗ್ಯಕ್ಕೂ ಆದ್ಯತೆ

ಬೊಳಂತೂರು: ರಾಜ್ಯಾದ್ಯಂತ 2026–27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ನಡೆಯುತ್ತಿರುವ ಸಂದರ್ಭದಲ್ಲಿ, ಶತಮಾನೋತ್ಸವ ಕಂಡ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೊಳಂತೂರಿನಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳಿಗೂ ಒತ್ತು ನೀಡಿದ ಈ ಕಾರ್ಯಕ್ರಮ ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು.
ಜಮಾಅತೆ ಇಸ್ಲಾಮಿ ಸೋಶಿಯಲ್ ಸರ್ವಿಸ್ ಯೂನಿಟ್ ಮಂಗಳೂರು ವತಿಯಿಂದ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಗಿದ್ದು, ಇದರ ಉದ್ಘಾಟನೆಯನ್ನು ಜಮಾಅತೆ ಇಸ್ಲಾಮಿ ಪಾಣೆಮಂಗಳೂರು ಶಾಖೆಯ ಅಧ್ಯಕ್ಷ ಮುಖ್ತಾರ್ ಅಹ್ಮದ್ ನೆರವೇರಿಸಿದರು. ನೀರು ಮಾನವ ಜೀವನದ ಅಮೂಲ್ಯ ಸಂಪತ್ತು ಎಂದು ಹೇಳಿದ ಅವರು, ಜಾತಿ–ಮತ ಭೇದವಿಲ್ಲದೆ ಎಲ್ಲರಿಗೂ ಶುದ್ಧ ನೀರು ಒದಗಿಸುವುದು ಸಮಾಜದ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು. ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಶುದ್ಧ ಕುಡಿಯುವ ನೀರು ಅತ್ಯಗತ್ಯವಾಗಿದ್ದು, ಈ ಘಟಕವನ್ನು ಸಂರಕ್ಷಿಸಿ ಸ್ವಚ್ಛತೆ ಕಾಪಾಡಬೇಕೆಂದು ಈ ಸಂಧರ್ಭದಲ್ಲಿ ನುಡಿದರು.

ಬಂಟ್ವಾಳ ತಾಲೂಕು ಪ್ರಭಾರ ಶಿಕ್ಷಣಾಧಿಕಾರಿ ಮಾಲತಿ ಕೆ. ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಮತ್ತು ಸಮಾಜಮುಖಿ ಸಂಘಟನೆಗಳ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದರು. ಇಂತಹ ನೆರವಿನಿಂದ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಹಾಗೂ ಮೂಲಭೂತ ಸೌಲಭ್ಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಜಮಾಅತೆ ಇಸ್ಲಾಮಿ ಸಂಸ್ಥೆಯು ಹಲವು ಶಾಲೆಗಳಿಗೆ ಪುಸ್ತಕ, ಕೊಳವೆಬಾವಿ, ಶೌಚಾಲಯ ಹಾಗೂ ಶುದ್ಧ ನೀರಿನ ಘಟಕಗಳನ್ನು ನೀಡುತ್ತಿರುವ ಸೇವಾ ಕಾರ್ಯ ಶ್ಲಾಘನೀಯ.ದಾನಿಗಳ ಮೂಲಕ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಹಸೈನಾರ್ ತಾಳಿತ್ತನೂಜಿಯವರ ಸೇವೆಯನ್ನು ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಬಶೀರ್ ನಾರಂಕೋಡಿ ವಹಿಸಿದ್ದರು.

ವೇದಿಕೆಯಲ್ಲಿ ಜಮಾಅತೆ ಇಸ್ಲಾಮಿ ಪಾಣೆಮಂಗಳೂರು ಶಾಖೆಯ ಅಧ್ಯಕ್ಷ ಮುಖ್ತಾರ್ ಅಹ್ಮದ್, ಸಲೀಂ ಬೊಳಂಗಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೈನಾರ್ ತಾಳಿತ್ತನೂಜಿ,ಕಾಸಿಂ ಚೆಂಡಾಡಿ, ಶಕೂರ್ ಬೊಳಂತೂರು, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬೊಳಂತೂರು ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾದ್ಯಕ್ಷ ಯಾಕೂಬ್ ಡಿ.,ಸದಸ್ಯೆ ಶಾಲಿನಿ ನಿವೃತ್ತ ದೈಹಿಕ ಶಿಕ್ಷಕ ಶಂಕರ್, ಶಿಕ್ಷಣಪ್ರೇಮಿ ಇಸ್ಮಾಯಿಲ್ ಬೊಳಂತೂರು, ಸಮಾಜಸೇವಕ ಅಬ್ದುಲ್ ಹಮೀದ್ ಎನ್.ಸಿ.ರೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸುಜಾತ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ದೈಹಿಕ ಶಿಕ್ಷಕರಾದ ಹರೀಶ್ ಸರ್, ಉಮೇಶ್ ಸರ್, ಶ್ರೀಮತಿ ಸುಲೋಚನ ಹಾಗೂ ಜಮ್ಸೀರಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಭವ್ಯ ಅಚ್ಚುಕಟ್ಟಾಗಿ ನಿರ್ವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!