ವಾಹನ ಸವಾರರ ನಿಯಮ ಉಲ್ಲಂಘನೆ, ಕ್ರಿಮಿನಲ್ ಕೃತ್ಯಗಳು, ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಕಣ್ಣಿಡಲು ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಏಐ ಕೆಮೆರಾ ಅಳವಡಿಸಲು ರಾಜ್ಯ ಸರಕಾರ 20 ಕೋಟಿ ರೂಪಾಯಿ ಅನುದಾನ ಒದಗಿಸಿರುವುದು ಸ್ವಾಗತಾರ್ಹ. ಆದರೆ, ಕೆಮೆರಾಗಳ ನಿರ್ವಹಣೆಯ ಜವಾಬ್ದಾರಿಯನ್ನು ದೇರಳಕಟ್ಟೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ವಹಿಸಲು ಕ್ಷೇತ್ರದ ಶಾಸಕ ಯು ಟಿ ಖಾದರ್ ಮುಂದಾಗಿರುವುದು ಖಂಡನಾರ್ಹ. ಖಾಸಗಿ ಮೆಡಿಕಲ್ ಕಾಲೇಜು ಮಾಲಕರ ಮೇಲೆ ಖಾದರ್ ಅವರ ಅತಿ ಪ್ರೀತಿಯನ್ನು ಇದು ಎತ್ತಿ ತೋರಿಸುತ್ತದೆ. ಇದು ಆಡಳಿತದ ಮೇಲೆ ಖಾಸಗಿ ಲಾಬಿಗಳ ಅತಿಯಾದ ಹಸ್ತಕ್ಷೇಪಕ್ಕೆ ಕಾರಣ ಆಗುತ್ತದೆ ಎಂದು ಸಿಪಿಐಎಂ ದ.ಕ ಜಿಲ್ಲಾ ಸಮಿತಿ ಆರೋಪಿಸಿದೆ.
ಕಾನೂನು ಸುವ್ಯವಸ್ಥೆಯಂತಹ ಸೂಕ್ಷ್ಮ ವಿಚಾರಗಳನ್ನು ಒಳಗೊಂಡ ಏಐ ಕೆಮೆರಾಗಳು ವಾಹನ ಸವಾರರು, ಕಾನೂನು ಬಾಹಿರ ಚಟುವಟಿಕೆಗಳ ಜೊತೆಗೆ ಸಾರ್ವಜನಿಕರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಟ್ಟಿರುತ್ತದೆ. ಕಾನೂನು ಪಾಲನೆ ಬಿಗುಗೊಳಿಸುವ, ಕ್ರಿಮಿನಲ್ ಚಟುವಟಿಕೆ ನಿಗ್ರಹಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಮೆರಾಗಳ ಮೇಲೆ ನಿಗಾ ಇಡುವುದು, ನಿಯಂತ್ರಣ ಹೊಂದುವುದು ಸರಿಯಾದ ಕ್ರಮ. ಆದರೆ, ನಿಯಂತ್ರಣ ಕೊಠಡಿ ಖಾಸಗಿ ಮೆಡಿಕಲ್ ಕಾಲೇಜು ಆಡಳಿತದ ಅಡಿಗೆ ಬರುವುದು ಯಾವುದೇ ಕಾರಣಕ್ಕೂ ಒಪ್ಪತಕ್ಕ ವಿಷಯ ಅಲ್ಲ. ಕಾನೂನು ಉಲ್ಲಂಘನೆಯ ಜೊತೆಗೆ ಸಾರ್ವಜನಿಕರ ಚಟುವಟಿಕೆಗಳೂ ಈ ಕೆಮೆರಾದಲ್ಲಿ ಸೆರೆ ಆಗುವುದರಿಂದ, ಖಾಸಗಿ ಮೆಡಿಕಲ್ ಕಾಲೇಜುಗಳ ನಿರ್ವಹಣೆಯ ಸಂದರ್ಭದಲ್ಲಿ ನಾಗರಿಕರ ಖಾಸಗಿತನದ ಗೌಪ್ಯತೆಯ ಉಲ್ಲಂಘನೆಯ ಸಾಧ್ಯತೆಯೂ ಇರುತ್ತದೆ.
ಇಂತಹ ಹಲವು ಸೂಕ್ಷ್ಮ ಕಾರಣಗಳ ಜೊತೆಗೆ ಉಳ್ಳಾಲ ತಾಲೂಕಿನ ಸರಕಾರಿ ಆಸ್ಪತ್ರೆಗಳು, ಶಾಲೆಗಳು, ರಸ್ತೆಯ ವೃತ್ತಗಳು ಸಹಿತ ಈಗ ಸರಕಾರವು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ಅಳವಡಿಸುತ್ತಿರುವ ಏಐ ಕೆಮೆರಾಗಳ ನಿರ್ವಹಣೆಯನ್ನೂ ಖಾಸಗಿ ಮೆಡಿಕಲ್ ಕಾಲೇಜುಗಳ ಸುಪರ್ದಿಗೆ ಒದಗಿಸುವುದು ಶಾಸಕ ಖಾದರ್ ಅವರಿಗೆ ಖಾಸಗೀ ವಲಯದ ಬಲಾಢ್ಯ ಲಾಬಿಗಳ ಮೇಲಿನ ಅತಿಯಾದ ಮೋಹದಿಂದ ಉಂಟಾಗಿರುವ ಕುರುಡುತನದಂತೆ ಭಾಸವಾಗುತ್ತದೆ. ಇದು ಮುಂದಕ್ಕೆ ಉಳ್ಳಾಲದ ಆಡಳಿತದ ಮೇಲೆ ಖಾಸಗಿಯವರ ಏಕಸ್ವಾಮ್ಯಕ್ಕೆ ಕಾರಣವಾಗಲಿದೆ. ಆಡಳಿತ ಪಕ್ಷದ ಪ್ರಧಾನ ನಾಯಕನ ಈ ನಡೆಗಳು ಮುಂದಕ್ಕೆ ಇಡೀ ಜಿಲ್ಲೆಗೆ ಅನ್ವಯಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿ ಕಾಣಿಸುತ್ತದೆ. ಇಂತಹ ಅಪಾಯಕಾರಿ ಯೋಚನೆ, ಒಪ್ಪಂದಗಳನ್ನು ಸಿಪಿಐಎಂ ಬಲವಾಗಿ ವಿರೋಧಿಸುತ್ತದೆ. ಏಐ ಕೆಮೆರಾಗಳ ನಿರ್ವಹಣೆ, ನಿಯಂತ್ರಣ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ನೀಡುವ ಪ್ರಸ್ಥಾವನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸುತ್ತದೆ.