ಜೂನ್ 5ಕ್ಕೆ ಎವಿಜಿ ಶಾಲಾ ಆರಂಭೋತ್ಸವ: 7, 8ನೇ ತರಗತಿ ಆರಂಭ

ಮೂರು ವರ್ಷಗಳಿಂದ ಕೃಷ್ಣನಗರ ಬಳಿಯ ಬನ್ನೂರು ಗ್ರಾಮದ ಅಲುಂಬುಡದಲ್ಲಿ ಕಾರ್ಯಾಚರಿಸುತ್ತಿರುವ ಎ.ವಿ.ಜಿ. ಇಂಗ್ಲಿಷ್ ಮೀಡಿಯಂ ಸ್ಕೂಲ್ ಜೂ.5ಕ್ಕೆ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ನಡೆಯಲಿದೆ. ಇದರ ಜೊತೆಗೆ ಹೊಸದಾಗಿ 7 ಮತ್ತು 8 ನೇ ತರಗತಿಯು ಆರಂಭಗೊಳ್ಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಅವರು ಮಾತನಾಡಿ ಎ.ವಿ.ನಾರಾಯಣ ಅವರ ತಂದೆಯ ಸ್ಮರಣಾರ್ಥ 3 ವರ್ಷಗಳ ಹಿಂದೆ ಕೇವಲ 30 ಮಕ್ಕಳಿಂದ ಪ್ರಾರಂಭವಾದ ಈ ಶಿಕ್ಷಣ ಸಂಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಾ ಹೋಗಿ ಈ ಶೈಕ್ಷಣಿಕ ವರ್ಷದಲ್ಲಿ 250 ಮಕ್ಕಳು ಶಾಲೆಗೆ ದಾಖಲಾಗುವ ನಿರೀಕ್ಷೆಯಿದೆ. ಆಚೆ ಗ್ರಾಮೀಣ ಭಾಗ, ಇತ್ತ ಕಡೆ ಪೇಟೆಯನ್ನೂ ಒಳಗೊಂಡಿರುವ ಸುಂದರ ಹಸಿರು ಪರಿಸರದ ಮಧ್ಯದಲ್ಲಿ ಈ ಸಂಸ್ಥೆ ಕಾರ್ಯಾಚರಿಸುತ್ತಿದೆ.

ಮೌಲ್ಯಯುತ ಶಿಕ್ಷಣ ನಮ್ಮ ಗುರಿ. ಅದನ್ನು ನೀಡಿದಲ್ಲಿ ಮುಂದೆ ಬಲಿಷ್ಠ ಭಾರತ ನಿರ್ಮಾಣ ಮಾಡಬಲ್ಲ ಪ್ರಜೆಗಳು ಮೂಡಿ ಬರಲು ಸಾಧ್ಯ ಎಂಬ ಸಂಕಲ್ಪದೊಂದಿಗೆ ಈ ಸಂಸ್ಥೆ ನಡೆಯುತ್ತಿದೆ ಎಂದು ಅವರು ಶಾಸಕರು, ಊರವರ ಮತ್ತು ಪೋಷಕರ ಸಹಕಾರದಿಂದ ಸಂಸ್ಥೆ ಅಭಿವೃದ್ಧಿ ಹೊಂದುತ್ತಿದೆ. ಜೊತೆಗೆ ಶಾಸಕರ ಅಶೋಕ್ ಕುಮಾರ್ ರೈ ಅವರು ರಸ್ತೆಗೆ ರೂ. 10ಲಕ್ಷ ಅನುದಾನ ಮಂಜೂರು ಮಾಡಿರುವುದು ಸಂತೋಷದ ವಿಚಾರ ಎಂದು ಹೇಳಿದರು.

ಎವಿಜಿ ಶಿಕ್ಷಣ ಸಂಸ್ಥೆಯ 2026-27ನೇ ಸಾಲಿನಲ್ಲಿ 4ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭ ಜೂ.5ಕ್ಕೆ ಶಾಲಾ ಆರಂಭೋತ್ಸವ ನಡೆಯಲಿದೆ. ಶೈಕ್ಷಣಿಕ ವರ್ಷದ ಆರಂಭೋತ್ಸವವನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆ ದಿನ ಬೆಳಗ್ಗೆ ಸಂಪ್ರದಾಯದಂತೆ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಸರಸ್ವತಿ ಪೂಜೆ ನಡೆಯಲಿದೆ. ಬಳಿಕ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ವೆಂಕಟ್ರಮಣ ಗೌಡ ಕಳುವಾಜೆ ಹೇಳಿದರು.

ರಾಷ್ಟ್ರ ಜಾಗೃತಿ, ಪರಿಸರ ಜಾಗೃತಿ ಮತ್ತು ಮಾನವೀಯತೆಯ ಜಾಗೃತಿಗಳ ಜೊತೆಗೆ ರಾಷ್ಟ್ರ ಮೊದಲು ಎಂಬ ಮೌಲ್ಯವನ್ನು ಎಳವೆಯಲ್ಲಿಯೇ ಮಕ್ಕಳಿಗೆ ನೀಡುವ ಉದ್ದೇಶವನ್ನು ನಮ್ಮ ಸಂಸ್ಥೆ ಹೊಂದಿದೆ.

ವಿದ್ಯಾಭಾರತಿ ಕರ್ನಾಟಕದ ಜೊತೆಗೆ ಜೋಡೆಯಾಗಿರುವ ಎವಿಜಿ ಶಿಕ್ಷಣ ಸಂಸ್ಥೆಯಲ್ಲಿ ಭಾರತದ ಸಂವಿಧಾನ ಪೀಠಿಕೆ ವಾಚನ, ಯೋಗ, ಕ್ರೀಡೆ,, ಸಂಗೀತ, ಯಕ್ಷಗಾನ, ಕರಾಟೆ, ಭರತನಾಟ್ಯ, ಚಿತ್ರಕಲೆ, ಅಬಾಕಸ್ ಚಟುವಟಿಕೆಗಳ ಜೊತೆಗೆ ಭಜನೆ, ಸಂಸ್ಕೃತ ಶ್ಲೋಕ ಪಠಣಗಳನ್ನು ಪಠ್ಯದೊಂದಿಗೆ ಕಲಿಸಲಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಎ.ವಿ.ಜಿ. ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಸಂಚಾಲಕ ಎ.ವಿ.ನಾರಾಯಣ, ಉಪಾಧ್ಯಕ್ಷ ಉಮೇಶ್ ಮಲುವೇಳು, ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಮುಖ್ಯಗುರು ಅಮರನಾಥ ಬಿ.ಪಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!