ಮಣ್ಣಿನ ಒಡಲಾಳದಲ್ಲಿ ಅಡಗಿರುವ ಬೀಜವೊಂದು ಸೂಕ್ತ ಕಾಲದ ಮಳೆಗಾಗಿ ಕಾಯುವಂತೆ, ಕಲೆಯೆಂಬುದು ಕೆಲವರ ಆಂತರ್ಯದಲ್ಲಿ ಸುಪ್ತ ಜ್ವಾಲೆಯಾಗಿ ಧಗಧಗಿಸುತ್ತಿರುತ್ತದೆ. ಅದಕ್ಕೆ ಪ್ರೋತ್ಸಾಹದ ತಂಗಾಳಿ ಸೋಕಿದಾಗ ಮಾತ್ರ ಅದು ಜಗತ್ತನ್ನು ಬೆಳಗುವ ನಂದಾದೀಪವಾಗುತ್ತದೆ. ಹಳ್ಳಿಯ ಹಸಿರು ಹೊದಿಕೆಯ ಪರಿಸರದಲ್ಲಿ, ಗ್ರಾಮೀಣ ಬದುಕಿನ ನೋವು ನಲಿವುಗಳ ನೈಜ ಪಾಠಶಾಲೆಯಲ್ಲಿ ಬೆಳೆದು ಬಂದ ಯುವಕ ಉದಯ ಕುಮಾರ್ ನೆಟ್ಟಣಿಗೆ. ಬಾಲ್ಯದಿಂದಲೇ ಕಲಾಭಿಮಾನದ ತೀವ್ರ ಹಂಬಲವನ್ನು ಎದೆಯೊಳಗೆ ನುಂಗಿ ಹಿಡಿದಿಟ್ಟುಕೊಂಡು, ದಿನನಿತ್ಯದ ಬದುಕಿನ ಜವಾಬ್ದಾರಿಗಳ ನಡುವೆ ಅದನ್ನು ಜಾಗೃತವಾಗಿರಿಸಿಕೊಂಡಿದ್ದ ಈ ಅಪರೂಪದ ಪ್ರತಿಭೆ ಇಂದು ಬೆಳ್ಳಿಪರದೆಯ ಮೇಲೆ ಮಿನುಗಲು ಹೊರಟ ಹಾದಿ ನಿಜಕ್ಕೂ ರೋಮಾಂಚನಕಾರಿಯಾಗಿದೆ.
ದೈನಂದಿನ ಬದುಕಿನಲ್ಲಿ ಉದಯ ಕುಮಾರ್ ಅವರು ಸಹಕಾರಿ ಬ್ಯಾಂಕಿನ ಜವಾಬ್ದಾರಿಯುತ ನೌಕರ.
ಬ್ಯಾಂಕಿಗೆ ಬರುವ ನೂರಾರು ಗ್ರಾಹಕರನ್ನು ಸದಾ ಹಸನ್ಮುಖಿಯಾಗಿ ಬರಮಾಡಿಕೊಳ್ಳುವ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಇವರ ಸರಳ ಮತ್ತು ಆಪ್ತ ಸ್ವಭಾವ ಎಲ್ಲರಿಗೂ ಅಚ್ಚುಮೆಚ್ಚು. ಮನದೊಳಗಿನ ಎಷ್ಟೇ ಒತ್ತಡಗಳಿದ್ದರೂ ಅದನ್ನು ಮುಖದಲ್ಲಿ ತೋರದೆ, ಎಲ್ಲರೊಳಗೊಂದಾಗಿ ಬೆರೆಯುವ ಇವರ ಈ ಗುಣವೇ ಒಂದು ಅದ್ಭುತ ಕಲೆಯಾಗಿದೆ. ಆದರೆ ಮೊನ್ನೆ ಮೊನ್ನೆ ಹಳ್ಳಿಯ ಜನರೆಲ್ಲ ಆಶ್ಚರ್ಯಚಕಿತರಾಗುವ ಘಟನೆಯೊಂದು ನಡೆಯಿತು. ಸದಾ ಕಡತಗಳ ನಡುವೆ ಇರುತ್ತಿದ್ದ ಉದಯ ಅವರು, ಗಂಭೀರವಾದ ಪೋಲಿಸ್ ಅಧಿಕಾರಿಯ ಪೋಷಾಕು ಧರಿಸಿ ಅದೇ ಹಳ್ಳಿಯ ಬೀದಿಯಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದರು! ಊರಿನವರು ಕುತೂಹಲದಿಂದ ವಿಚಾರಿಸಿದಾಗ ದಕ್ಕಿದ್ದು ಆನಂದದ ಸುದ್ದಿ; ಅದು ಯಾವುದೋ ನಾಟಕವಲ್ಲ, ಬದಲಿಗೆ ‘ಸೆವೆನ್ ಸೆಕೆಂಡ್ಸ್’ (Seven seconds) ಎನ್ನುವ ಸಸ್ಪೆನ್ಸ್ ಥ್ರಿಲ್ಲರ್ ಮಲಯಾಳಂ ಚಲನಚಿತ್ರದ ಚಿತ್ರೀಕರಣವಾಗಿತ್ತು! ನಮ್ಮದೇ ಮಣ್ಣಿನ ಹೆಮ್ಮೆಯ ಬಹುಭಾಷಾ ನಟರಾದ ರಿಷಿ ಪ್ರಕಾಶ್ ಕಿನ್ನಿಂಗಾರು (ಸೂರ್ಯ) ಅವರ ಕಣ್ಣಿಗೆ ಉದಯ ಅವರಲ್ಲಿದ್ದ ಪ್ರತಿಭೆ ಗೋಚರವಾದಾಗ, ಈ ದೊಡ್ಡ ವೇದಿಕೆಯ ಅವಕಾಶ ತೆರೆದುಕೊಂಡಿತು.
ಉದಯ ಅವರ ಈ ಸಾಧನೆ ಕೇವಲ ಆಕಸ್ಮಿಕವಲ್ಲ; ಅದು ವರ್ಷಗಳ ಕಾಲ ನಡೆಸಿದ ಕಲಾ ತಪಸ್ಸಿನ ಫಲವಾಗಿದೆ. ತುಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳ ಹವ್ಯಾಸಿ ಕಲಾವಿದನಾಗಿ ಸದ್ದಿಲ್ಲದೆ ಅಭಿನಯಿಸುತ್ತಾ, ತಮ್ಮ ಅದ್ಭುತ ಧ್ವನಿ ಅನುಕರಣೆ (ಮಿಮಿಕ್ರಿ) ಕಲೆಯ ಮೂಲಕ ಸ್ಥಳೀಯರ ಮನಗೆದ್ದವರು ಇವರು. ಇವರ ಕಲಾ ಪಯಣವು ಮಲಯಾಳಂ ಭಾಷೆಯ ‘ಕಯರ್’ ಎಂಬ ಕಿರುಚಿತ್ರದ ಮೂಲಕ ಹಾಗೂ ‘ಕುಪ್ಪಿ ವಳಗಳ್’ ಎಂಬ ಧ್ವನಿಸುರುಳಿಯ ಗೀತೆಯ ನಟನೆಯ ಮೂಲಕ ಹಂತ ಹಂತವಾಗಿ ಅರಳುತ್ತಾ ಬಂದಿತು. ನಂತರ ಕನ್ನಡದ ‘ಪರ್ಯಾಪ್ತ’ ಕಿರುಚಿತ್ರದಲ್ಲಿ ಮೊದಲ ಬಾರಿಗೆ ರಕ್ಷಕ ಅಧಿಕಾರಿಯ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದ ಇವರು, ರಿಷಿ ಪ್ರಕಾಶ್ ಅವರದೇ ನಿರ್ದೇಶನದ ‘ನಿಟ್ಟೋಣೆ’ ಕಿರುಚಿತ್ರದಲ್ಲಿನ ಅದ್ಭುತ ನಟನೆಯ ಮೂಲಕ ದೊಡ್ಡ ಚಲನಚಿತ್ರ ರಂಗಕ್ಕೆ ತಲುಪಲು ಭದ್ರ ಬುನಾದಿ ಹಾಕಿಕೊಂಡರು.
“ನನಗಿದು ರಿಷಿ ಪ್ರಕಾಶ್ ಅವರು ನೀಡಿದ ಮಹೋನ್ನತ ಪ್ರೋತ್ಸಾಹವಷ್ಟೇ. ನಾನಿನ್ನೂ ಒಂದು ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ…” ಎಂದು ಉದಯ ಅವರು ವಿನಯದಿಂದ ನುಡಿಯುವಾಗ, ಸಾಧನೆಯ ಹಸಿವಿರುವ ಒಬ್ಬ ಸಚ್ಚರಿತ ಕಲಾವಿದನ ಪರಿಪಕ್ವತೆ ಅಲ್ಲಿ ಎದ್ದುಕಾಣುತ್ತಿತ್ತು. ಅವರ ಕಲಾ ಪಯಣದ ಮುಂದಿನ ಹೆಜ್ಜೆಯಾಗಿ, ಶೀಘ್ರದಲ್ಲೇ ತಮಿಳು ಸಿನಿಮಾವೊಂದರಲ್ಲಿ ಅಭಿನಯಿಸಲು ಅವರು ಚೆನ್ನೈ ನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂಬುದು ನಮಗೆಲ್ಲ ಹೆಮ್ಮೆಯ ವಿಚಾರ.
ಹಳ್ಳಿಯ ಯುವಕರಿಗೆ ಒಂದು ಕಾಲದಲ್ಲಿ ಚಲನಚಿತ್ರ ರಂಗ ಎಂಬುದು ಗಗನ ಕುಸುಮದಂತೆ, ಕೇವಲ ದೂರದಿಂದ ನೋಡಿ ಆಸ್ವಾದಿಸುವ ಅದ್ಭುತ ಲೋಕವಾಗಿತ್ತು. ಆದರೆ ಇಂದು ನಮ್ಮದೇ ಮಣ್ಣಿನ ಪ್ರತಿಭೆಗಳು ತಮ್ಮ ಕಠಿಣ ಪರಿಶ್ರಮ, ವಿನಯ ಹಾಗೂ ಅದಮ್ಯ ಕಲಾಭಿಮಾನದ ಮೂಲಕ ಆ ಗಗನ ಕುಸುಮವನ್ನು ಕೈಗೆಟುಕುವಂತೆ ಮಾಡುತ್ತಿರುವುದು ಗ್ರಾಮೀಣ ಭಾಗದ ನೂರಾರು ಪ್ರತಿಭೆಗಳಿಗೆ ಹೊಸ ಆಶಾಕಿರಣವಾಗಿದೆ. ವ್ಯಕ್ತಿತ್ವದಲ್ಲಿ ಸರಳತೆ, ವೃತ್ತಿಯಲ್ಲಿ ಪ್ರಾಮಾಣಿಕತೆ ಹಾಗೂ ಕಲೆಯಲ್ಲಿ ನಿರಂತರ ಶ್ರದ್ಧೆಯನ್ನು ಕಾಯ್ದುಕೊಂಡಿರುವ ಉದಯ ಕುಮಾರ್ ನೆಟ್ಟಣಿಗೆ ಅವರ ಕಲಾ ಪಯಣವು ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ಮುನ್ನಡೆಯಲಿ. ಬೆಳ್ಳಿಪರದೆಯ ವಿಶಾಲ ಆಕಾಶದಲ್ಲಿ ಅವರು ಉಜ್ವಲ ನಕ್ಷತ್ರವಾಗಿ ಮೂಡಿಬರಲಿ ಎಂಬುದೇ ಕಲಾಭಿಮಾನಿಗಳಾದ ನಮ್ಮೆಲ್ಲರ ಆಶಯ ಮತ್ತು ಪ್ರೀತಿಯ ಹಾರೈಕೆ. ಶುಭವಾಗಲಿ!
✍️: ದಯಾನಂದ ರೈ ಕಳ್ವಾಜೆ