ಬಂಟ್ವಾಳ, ಜೂ. 8: ಜಿಲ್ಲೆಯ ಹಿಂದಿನ ಜನಪ್ರತಿನಿಧಿಗಳಂತೆ ತಾನೂ ಕಾರ್ಯನಿರ್ವಹಿಸಿ ಜಿಲ್ಲೆಗೆ ಗೌರವ ತರುವ ಕೆಲಸ ಮಾಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಭಾನುವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಕೇಂದ್ರದ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿಯವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಅವರು ಮಾತನಾಡಿದರು.
“ಜನಾರ್ಧನ ಪೂಜಾರಿಯವರು ನನ್ನ ರಾಜಕೀಯ ಗುರುಗಳು. ಕಾಲೇಜು ದಿನಗಳಿಂದಲೇ ತಂದೆಯಷ್ಟೇ ಪ್ರೀತಿ, ಮಾರ್ಗದರ್ಶನ ನೀಡಿ ರಾಜಕೀಯವಾಗಿ ಬೆಳೆಸಿದ್ದಾರೆ. ತಪ್ಪು ಮಾಡಿದಾಗ ತಿದ್ದಿ, ಉತ್ತಮ ಕೆಲಸಗಳಿಗೆ ಪ್ರೇರಣೆ ನೀಡಿದವರನ್ನು ಎಂದಿಗೂ ಮರೆಯುವುದಿಲ್ಲ” ಎಂದು ಖಾದರ್ ಹೇಳಿದರು.
ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿದ್ದೇನೆ. ಜಿಲ್ಲೆಯ ಜನರ ಸೇವೆಗೆ ಎಲ್ಲರ ಸಹಕಾರ ಮತ್ತು ಆಶೀರ್ವಾದ ಅಗತ್ಯ ಎಂದು ಅವರು ತಿಳಿಸಿದರು.
ಈ ವೇಳೆ ಮಾತನಾಡಿದ ಬಿ. ಜನಾರ್ಧನ ಪೂಜಾರಿ, “ಕಾಂಗ್ರೆಸ್ ಕಾರ್ಯಕರ್ತರೇ ಪಕ್ಷದ ಜೀವಾಳ. ಅವರನ್ನು ಎಂದಿಗೂ ಮರೆಯಬೇಡಿ, ಕಾಯಿಸಬೇಡಿ. ಜನಪರ ಮತ್ತು ಉತ್ತಮ ಕೆಲಸಗಳನ್ನು ಮಾಡಿ” ಎಂದು ಖಾದರ್ ಅವರಿಗೆ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ದೀಪಕ್ ಪೂಜಾರಿ, ಪದ್ಮರಾಜ್ ಆರ್. ಪೂಜಾರಿ, ಭರತ್ ಮುಂಡೋಡಿ, ಡಾ. ರಾಜಾರಾಮ್, ಅಬ್ಬಾಸ್ ಅಲಿ, ಚಂದ್ರಶೇಖರ ಭಂಡಾರಿ, ಜೋಸ್ಮಿನ್, ಶೈಲಜಾ ರಾಜೇಶ್, ಉಮ್ಮರ್ ಫಾರೂಕ್, ಸದಾಶಿವ ಉಳ್ಳಾಲ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.