ಬೆಂಗಳೂರು, ಜೂನ್ 9: ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ಕುರಿತ ಅಸಮಾಧಾನ ಇನ್ನೂ ಸಂಪೂರ್ಣ ಶಮನಗೊಂಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿರುವ ನಡುವೆಯೇ, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಖಾತೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸುದ್ದಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಸ್ವೀಕರಿಸಲು ಕೃಷ್ಣ ಬೈರೇಗೌಡ ಅವರು ಹಿಂದೇಟು ಹಾಕಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್ಡಿಎ)ಗಳನ್ನು ತಮ್ಮ ಇಲಾಖೆಯ ವ್ಯಾಪ್ತಿಗೆ ತರಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಗಮನಕ್ಕೂ ವಿಷಯವನ್ನು ತಂದಿದ್ದರೂ ಯಾವುದೇ ಸ್ಪಷ್ಟ ನಿರ್ಧಾರ ಹೊರಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಹೀಗಾಗಿ ತಮ್ಮ ಬೇಡಿಕೆಯನ್ನು ಹೈಕಮಾಂಡ್ ಮಟ್ಟದಲ್ಲಿ ಮಂಡಿಸಲು ಕೃಷ್ಣ ಬೈರೇಗೌಡ ಅವರು ದೆಹಲಿಗೆ ತೆರಳಿರುವ ಸಾಧ್ಯತೆಯಿದ್ದು, ಅಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಚಿವರಿಗೆ ಖಾತೆ ಹಂಚಿಕೆ ನಡೆದ ಬಳಿಕ ಹಿರಿಯ ಸಚಿವರಾದ ರಾಮಲಿಂಗಾ ರೆಡ್ಡಿ ಹಾಗೂ ಕೆ.ಎಚ್. ಮುನಿಯಪ್ಪ ಅವರು ತಮ್ಮ ಖಾತೆಗಳ ಕುರಿತು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು.
ಬಳಿಕ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ ಹಿರಿಯ ನಾಯಕರನ್ನು ಮನವೊಲಿಸುವ ಮೂಲಕ ಅಸಮಾಧಾನವನ್ನು ಶಮನಗೊಳಿಸಿತ್ತು. ಇದೀಗ ಕೃಷ್ಣ ಬೈರೇಗೌಡ ಅವರ ಅಸಮಾಧಾನದ ವರದಿಗಳು ಕಾಂಗ್ರೆಸ್ ಸರ್ಕಾರದ ಒಳಾಂಗಣ ಬೆಳವಣಿಗೆಗಳಿಗೆ ಮತ್ತಷ್ಟು ಕುತೂಹಲ ಮೂಡಿಸಿವೆ.