ದಾವಣಗೆರೆ, ಲೇಖಕ ಹಾಗೂ ಚಿಂತಕ ಕೆ. ಎಸ್. ಭಗವಾನ್ ಅವರು ಶ್ರೀರಾಮನ ಕುರಿತು ನೀಡಿರುವ ಹೇಳಿಕೆ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಮಾಯಣದ ಕೆಲವು ಪ್ರಸಂಗಗಳು ಹಾಗೂ ಶ್ರೀರಾಮನ ಜನನದ ಕುರಿತು ಪ್ರಶ್ನೆಗಳನ್ನು ಎತ್ತಿದರು.
ತಮ್ಮ ಭಾಷಣದಲ್ಲಿ, “ನೀವು ಪೂಜೆ ಮಾಡುವ ಶ್ರೀರಾಮ ದಶರಥನಿಗೆ ಹುಟ್ಟಿದವನಲ್ಲ” ಎಂದು ಹೇಳಿದ ಭಗವಾನ್, ಈ ಕುರಿತು ತಾವು ಬರೆದಿರುವ ‘ರಾಮ ಮಂದಿರ ಏಕೆ ಬೇಕು?’ ಕೃತಿಯಲ್ಲಿ ಉಲ್ಲೇಖಿಸಿದ್ದು, ಅದಕ್ಕೆ ವಾಲ್ಮೀಕಿ ರಾಮಾಯಣ ಆಧಾರವಾಗಿದೆ ಎಂದು ಪ್ರತಿಪಾದಿಸಿದರು.
ರಾಮಾಯಣದಲ್ಲಿನ ಶಂಬೂಕ, ಸೀತೆ ಹಾಗೂ ಲಕ್ಷ್ಮಣನ ಪ್ರಸಂಗಗಳನ್ನು ಉಲ್ಲೇಖಿಸಿದ ಅವರು, ಶ್ರೀರಾಮನ ವ್ಯಕ್ತಿತ್ವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಪಂಚಾಂಗ ಮತ್ತು ಸಂಪ್ರದಾಯಗಳಿಗಿಂತ ವ್ಯಕ್ತಿ ತನ್ನ ಮೇಲೆ ನಂಬಿಕೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಮನನುಸ್ಮೃತಿ,ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಅವರ ವಿಚಾರಗಳನ್ನು ಪ್ರಸ್ತಾಪಿಸಿದ ಭಗವಾನ್, ಸಾಮಾಜಿಕ ಸಮಾನತೆ ಮತ್ತು ವೈಚಾರಿಕ ಸ್ವಾತಂತ್ರ್ಯದ ಅಗತ್ಯವನ್ನು ಒತ್ತಿ ಹೇಳಿದರು.
ಮದುವೆ ಸಮಾರಂಭಗಳಲ್ಲಿ ಪಠಿಸಲಾಗುವ ಮಂತ್ರಗಳ ಅರ್ಥ ತಿಳಿಯದೆ ಆಚರಣೆಗಳನ್ನು ಅನುಸರಿಸಲಾಗುತ್ತಿದೆ ಎಂದು ಟೀಕಿಸಿದ ಅವರು, ತಮ್ಮ ಮದುವೆಗೆ ಪುರೋಹಿತರನ್ನು ಆಹ್ವಾನಿಸಿರಲಿಲ್ಲ ಎಂದರು. ಅಲ್ಲದೆ, ಬೌದ್ಧ ಧರ್ಮವನ್ನು ಮಾನವೀಯ ಮತ್ತು ವೈಜ್ಞಾನಿಕ ಧರ್ಮವೆಂದು ಬಣ್ಣಿಸಿದರು.
ತಮ್ಮ ಹೇಳಿಕೆಗಳ ವಿರುದ್ಧ ಯಾರಾದರೂ ಕಾನೂನು ಕ್ರಮ ಕೈಗೊಳ್ಳಲು ಬಯಸಿದರೆ, ಸಂಪೂರ್ಣ ಮಾಹಿತಿ ತಿಳಿದುಕೊಂಡ ಬಳಿಕ ಮುಂದಾಗಲಿ ಎಂದು ಭಗವಾನ್ ಹೇಳಿದರು.
ಭಗವಾನ್ ಅವರ ಈ ಹೇಳಿಕೆಗಳು ಸಾಮಾಜಿಕ ಹಾಗೂ ರಾಜಕೀಯ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ವಿವಿಧ ಸಂಘಟನೆಗಳಿಂದ ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುವ ಸಾಧ್ಯತೆ ಇದೆ.