ಗೃಹಲಕ್ಷ್ಮಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರನ್ನು ಹೊರಹಾಕುವ ಹುನ್ನಾರ: ವೇದವ್ಯಾಸ ಕಾಮತ್ ಆರೋಪ

ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತೀ ಮನೆಯ ಯಜಮಾನಿಗೆ ಯಾವುದೇ ಷರತ್ತಿಲ್ಲದೇ ಎರಡು ಸಾವಿರ ರೂಪಾಯಿ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ನಾನಾ ಕಾರಣಗಳನ್ನು ನೀಡಿ ಒಂದೂವರೆ ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಯೋಜನೆಯಿಂದ ಹೊರ ಹಾಕಲು ಹುನ್ನಾರ ನಡೆಸಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸ್ಪಷ್ಟ ಮಾರ್ಗಸೂಚಿ, ಸಮರ್ಪಕ ಯೋಜನೆ, ಪಾರದರ್ಶಕ ವ್ಯವಸ್ಥೆಯಿಲ್ಲದೇ ಬೇಕಾಬಿಟ್ಟಿಯಾಗಿ ಯೋಜನೆ ಜಾರಿಗೆ ತಂದ ಪರಿಣಾಮ ರಾಜ್ಯದ ಪ್ರತಿಯೊಬ್ಬ ತೆರಿಗೆದಾರರ ಶ್ರಮದ ಹಣಕ್ಕೆ ಪೋಲಾಗಿದೆ. ಸಾವಿರಾರು ಮೃತ ಮಹಿಳೆಯರ ಹೆಸರಿನಲ್ಲಿ ನೂರಾರು ಕೋಟಿ ಹಣ ವರ್ಗಾವಣೆಯಾಗಿರುವುದು ರಾಜ್ಯ ಸರ್ಕಾರ ಕೃಪಾಪೋಷಿತ ಲೂಟಿಯಾಗಿದೆ. ಆದರೆ ಅರ್ಹ ತಾಯಂದಿರಿಗೆ ಪ್ರತೀ ತಿಂಗಳು ಬರಬೇಕಿದ್ದ ಬಾಕಿ ಹಣ ಅನೇಕರಿಗೆ ಇದುವರೆಗೂ ಜಮೆಯಾಗಿಲ್ಲ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದರು.

ಬಾಕಿ ಉಳಿಸಿಕೊಂಡಿದ್ದ ಎರಡು ಕಂತಿನ ಐದು ಸಾವಿರ ಕೋಟಿ ಏನಾಯಿತು ಎಂಬ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸಿದರೂ ಸಮರ್ಪಕ ಉತ್ತರ ನೀಡಿಲ್ಲ. ಒಟ್ಟಾರೆಯಾಗಿ ಗೃಹಲಕ್ಷ್ಮಿ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಬಹುದೊಡ್ಡ ಭ್ರಷ್ಟಾಚಾರ ನಡೆಸುತ್ತಿದ್ದು ಅದನ್ನು ಮುಚ್ಚಿ ಹಾಕಲು ಲಕ್ಷಾಂತರ ಸ್ವಾಭಿಮಾನಿ ಮಹಿಳೆಯರನ್ನು ಯೋಜನೆಯಿಂದ ತೆಗೆದು ಹಾಕಲಾಗುತ್ತಿರುವುದು ಖಂಡನೀಯ. ಈ ಸರ್ಕಾರದ ಅಸಲಿ ಬಣ್ಣ ಬಯಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿಯರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!