ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ಗೆ 5, ಬಿಜೆಪಿಗೆ 2 ಸ್ಥಾನ; ಅಡ್ಡ ಮತದಾನ ಭಾರೀ ಚರ್ಚೆಗೆ ಗ್ರಾಸ

ಬೆಂಗಳೂರು, ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಏಳು ಸ್ಥಾನಗಳ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ಬಿಜೆಪಿ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು, ಜೆಡಿಎಸ್ ಅಭ್ಯರ್ಥಿ ಸೋಲನುಭವಿಸಿದ್ದಾರೆ.

ಅಡ್ಡ ಮತದಾನ ಆರೋಪಗಳ ನಡುವೆಯೇ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸಂಖ್ಯಾಬಲಕ್ಕಿಂತ ಹೆಚ್ಚಿನ ಮತಗಳನ್ನು ಗಳಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.ಅಧಿಕೃತ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ಗೆ 135 ಶಾಸಕರ ಬೆಂಬಲವಿದ್ದರೂ, ಪಕ್ಷದ ಅಭ್ಯರ್ಥಿಗಳಿಗೆ ಒಟ್ಟು 151 ಮತಗಳು ಲಭಿಸಿವೆ. ಹೀಗಾಗಿ ಕಾಂಗ್ರೆಸ್ ತನ್ನ ಸಂಖ್ಯಾಬಲಕ್ಕಿಂತ 16 ಹೆಚ್ಚುವರಿ ಮತಗಳನ್ನು ಪಡೆದಿರುವುದು ವಿಶೇಷವಾಗಿದೆ. ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ಮೊದಲ ಸುತ್ತಿನಲ್ಲೇ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್ 30 ಮತಗಳು, ತಿಪ್ಪಣ್ಣಪ್ಪ ಕಮಕನೂರು 30 ಮತಗಳು, ಪಿ.ವಿ. ಮೋಹನ್ 29 ಮತಗಳು, ಬಿ.ಎಸ್. ಶಿವಣ್ಣ 30 ಮತಗಳು ಹಾಗೂ ವಿನಯ್ ಕಾರ್ತಿಕ್ 32 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿಗಳಾದ ಆರ್. ರಘು 29 ಮತಗಳು ಹಾಗೂ ಲಿಂಗರಾಜು ಪಾಟೀಲ್ 27 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ 64 ಶಾಸಕರ ಬಲವಿದ್ದರೂ, ಅದರ ಅಭ್ಯರ್ಥಿಗಳಿಗೆ ಒಟ್ಟು 56 ಮತಗಳು ಮಾತ್ರ ದೊರೆತಿದ್ದು, ಎಂಟು ಮತಗಳ ಕೊರತೆ ಕಂಡುಬಂದಿದೆ.

ಜೆಡಿಎಸ್‌ಗೆ 18 ಶಾಸಕರಿದ್ದರೂ, ಅದರ ಅಭ್ಯರ್ಥಿ ಗೋವಿಂದರಾಜು ಕೇವಲ 14 ಮತಗಳನ್ನು ಮಾತ್ರ ಪಡೆದಿದ್ದಾರೆ. ಎನ್‌ಡಿಎ ಮೈತ್ರಿ ಒಪ್ಪಂದದ ಭಾಗವಾಗಿ ಬಿಜೆಪಿ ತನ್ನ ಮೂವರು ಶಾಸಕರ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ವರ್ಗಾಯಿಸಲು ನಿರ್ಧರಿಸಿತ್ತು. ಹೀಗಾಗಿ ಜೆಡಿಎಸ್ ಅಭ್ಯರ್ಥಿಗೆ ಒಟ್ಟು 21 ಮತಗಳು ದೊರೆಯಬೇಕಾಗಿದ್ದರೂ, ಅಂತಿಮವಾಗಿ 14 ಮತಗಳಿಗೆ ಸೀಮಿತವಾಗಿದ್ದು, ಏಳು ಮತಗಳ ಕೊರತೆ ಉಂಟಾಗಿದೆ.

ಮತ ಎಣಿಕೆ ಪೂರ್ಣಗೊಂಡ ಬಳಿಕ ಎನ್‌ಡಿಎ ಮೈತ್ರಿಕೂಟದ ಮತಗಳು ಎಲ್ಲಿಗೆ ಹೋದವು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಎನ್‌ಡಿಎಗೆ ಒಟ್ಟಾರೆ 12 ಮತಗಳ ಕೊರತೆ ಕಂಡುಬಂದಿದ್ದು, ಅದರಲ್ಲಿ ಬಿಜೆಪಿಯ ಎಂಟು ಹಾಗೂ ಜೆಡಿಎಸ್‌ನ ನಾಲ್ಕು ಮತಗಳು ನಾಪತ್ತೆಯಾಗಿವೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಅಡ್ಡ ಮತದಾನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಡ್ಡ ಮತದಾನ ಮಾಡಿದವರು ಯಾರೆಂಬುದು ಶೀಘ್ರದಲ್ಲೇ ಬಹಿರಂಗವಾಗಲಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಬಿಜೆಪಿ ಎಚ್ಚರಿಕೆ ನೀಡಿದೆ.

ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಡ್ಡ ಮತದಾನದ ಆರೋಪಗಳನ್ನು ತಳ್ಳಿ ಹಾಕಿದ್ದು, ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.”ಕೆಲವರು ತಮ್ಮ ಆತ್ಮಸಾಕ್ಷಿಯ ಪ್ರಕಾರ ಮತ ಚಲಾಯಿಸಿರಬಹುದು. ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿರುವ ಆರೋಪಗಳು ಅವರ ನಿರಾಶೆಯನ್ನು ಪ್ರತಿಬಿಂಬಿಸುತ್ತವೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದ ಶಿವರಾಮ ಹೆಬ್ಬಾರ್ ಹಾಗೂ ಎಸ್.ಟಿ. ಸೋಮಶೇಖರ್ ಅವರಿಗೆ ಕಾಂಗ್ರೆಸ್ ಅವಕಾಶ ನೀಡಿದ್ದು, ಅವರು ತಮ್ಮ ಆತ್ಮಸಾಕ್ಷಿಯಂತೆ ಮತ ಚಲಾಯಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ವಿಧಾನ ಪರಿಷತ್ ಚುನಾವಣೆಯ ಈ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಅಡ್ಡ ಮತದಾನದ ಆರೋಪಗಳ ಕುರಿತಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆ ಇದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!