ಪ್ರಜಾಪ್ರಭುತ್ವದಲ್ಲಿ ನೈಜ ಭಾರತೀಯರ ಮತದಾನದ ಹಕ್ಕು ರಕ್ಷಿಸುವುದೇ ಎಸ್‌ಐಆರ್ ಉದ್ದೇಶ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಜೂ.22: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಮೂಲ ಉದ್ದೇಶ ಪ್ರಜಾಪ್ರಭುತ್ವದಲ್ಲಿ ನೈಜ ಭಾರತೀಯರ ಮತದಾನದ ಹಕ್ಕನ್ನು ಮತ್ತಷ್ಟು ಬಲಪಡಿಸುವುದಾಗಿದ್ದು, ಭಾರತೀಯರಲ್ಲದವರಿಗೆ ಮತದಾನದ ಹಕ್ಕು ನಿರಾಕರಿಸುವುದೇ ಇದರ ಆಶಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಾಂಗ್ಲಾದೇಶದವರು ಕರ್ನಾಟಕದಲ್ಲಿ ಮತದಾನ ಮಾಡಿ ಕಾಂಗ್ರೆಸ್ ಗೆದ್ದರೆ ಅದನ್ನು ಪ್ರಜಾಪ್ರಭುತ್ವ ಎಂದು ಒಪ್ಪಿಕೊಳ್ಳುವುದು ಕಷ್ಟ. ಬಾಂಗ್ಲಾದೇಶದವರು ಇಲ್ಲಿ ಬಂದು ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಮರಳಬೇಕು. ನಮ್ಮ ಜನತಾಂತ್ರಿಕ ವ್ಯವಸ್ಥೆಯ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅವರು ಭಾಗವಹಿಸದಂತೆ ಮಾಡುವ ವ್ಯವಸ್ಥೆಯೇ ಎಸ್‌ಐಆರ್” ಎಂದು ಹೇಳಿದರು.

ರಾಜ್ಯದಲ್ಲಿ ನಡೆದಿರುವ ಅಡ್ಡ ಮತದಾನ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, “ಅಡ್ಡ ಮತದಾನ ನಡೆದಿರುವುದು ನೂರಕ್ಕೆ ನೂರು ಸತ್ಯ. ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದರ ಕುರಿತು ಸಿ.ಟಿ. ರವಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಆದೇಶ ನೀಡಿದ್ದಾರೆ” ಎಂದರು.

“ತನಿಖಾ ವರದಿ ಬಂದ ಬಳಿಕ ಅದು ಯಾರೇ ಆಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೇಲ್ನೋಟಕ್ಕೆ ಮಾಹಿತಿ ಗೊತ್ತಿದ್ದರೂ ನಿಖರ ಮಾಹಿತಿ ಸಂಗ್ರಹಿಸುವುದು ಅಗತ್ಯ. ಕೆಲವರ ಹೆಸರುಗಳು ಮಾಧ್ಯಮಗಳಲ್ಲಿ ಬಂದಿದ್ದರೂ ಅವರು ತಾವು ಮತದಾನ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ತನಿಖಾ ವರದಿ ಬಂದ ನಂತರವೇ ಸ್ಪಷ್ಟ ಚಿತ್ರಣ ದೊರೆಯಲಿದೆ” ಎಂದು ತಿಳಿಸಿದರು.

“ಗೌಪ್ಯ ಮತದಾನ ನಡೆದಿದ್ದರೂ ವಿಪ್ ಜಾರಿಯಲ್ಲಿದ್ದ ಕಾರಣ ನಿಖರ ಮಾಹಿತಿ ಲಭ್ಯವಾಗಲಿದೆ. ಕಾರ್ಯಕರ್ತರು ನೋವಿನಲ್ಲಿದ್ದು, ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರಿಗೆ ಅವಕಾಶ ನಿರಾಕರಿಸಿದಾಗ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಲಿದೆ” ಎಂದು ಹೇಳಿದರು.

ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಪ್ರತಿಕ್ರಿಯೆ

ಬಿಜೆಪಿಯ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಸಂಬಂಧ ತಮ್ಮ ಹೆಸರು ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ, “ಕೇಂದ್ರ ನಾಯಕರು ಯಾವ ತೀರ್ಮಾನ ಕೈಗೊಂಡರೂ ಇಡೀ ರಾಜ್ಯ ಅದಕ್ಕೆ ಬದ್ಧವಾಗಿದೆ. ನನಗಿಂತ ಹಿರಿಯ ನಾಯಕರು ಏನು ತೀರ್ಮಾನ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವರ ತೀರ್ಮಾನದ ಬಗ್ಗೆ ನನ್ನ ಪ್ರತಿಕ್ರಿಯೆಯನ್ನು ಮುಂದೆ ತಿಳಿಸುತ್ತೇನೆ” ಎಂದರು.

ಬೆಂಗಳೂರು–ಮಡಗಾಂವ್ ವಂದೇ ಭಾರತ್ ರೈಲು ಯೋಜನೆ

ಬೆಂಗಳೂರು ಮತ್ತು ಮಡಗಾಂವ್ ನಡುವಿನ ಹೊಸ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಕುರಿತು ಚಿಂತನೆ ನಡೆಯುತ್ತಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲಿಗೆ ಚಾಲನೆ ನೀಡಲಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

“ಬೆಂಗಳೂರು ಯಶವಂತಪುರದಿಂದ ಹೊರಡುವ ಈ ರೈಲು ಮಂಗಳೂರು, ಉಡುಪಿ, ಉತ್ತರ ಕನ್ನಡ ಹಾಗೂ ಕಾರವಾರ ಮಾರ್ಗವಾಗಿ ಮಡಗಾಂವ್ ತಲುಪಲಿದೆ. ಯೋಜನೆಯ ಅನುಷ್ಠಾನ ಪ್ರಕ್ರಿಯೆ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ” ಎಂದು ಅವರು ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!