ಸೇತುವೆ ಅಗಲೀಕರಣಕ್ಕೆ ಆಗ್ರಹಿಸಿ ಪೆರುವಾಯಿಯಲ್ಲಿ ಪ್ರತಿಭಟನೆ

ವಿಟ್ಲ, ಜೂ. 23: ಪೆರುವಾಯಿ–ಪಕಳಕುಂಜ ರಸ್ತೆಯ ಕೆದುಮೂಲೆ ಹಾಗೂ ಪೆರುವಾಯಿ ಸೇತುವೆ, ಪೆರುವಾಯಿ–ಬೆರಿಪದವು ರಸ್ತೆಯ ಪೇರಡ್ಕ ಸೇತುವೆಯನ್ನು ವೈಜ್ಞಾನಿಕ ರೀತಿಯಲ್ಲಿ ಅಗಲೀಕರಣಗೊಳಿಸಬೇಕು. ಅಲ್ಲದೆ, ಪೆರುವಾಯಿಯಿಂದ ಬಾಳಶೆಟ್ಟಿಮೂಲೆ ಮೂಲಕ ಹಾದು ಹೋಗುವ ಕನ್ಯಾನ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ತರಬೇಕು ಹಾಗೂ ಓಣಿಬಾಗಿಲುವಿನಿಂದ ಪಕಳಕುಂಜ ತನಕ ರಸ್ತೆ ಅಗಲೀಕರಣಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪೆರುವಾಯಿ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮುರುವ ಮಹಾಬಲ ಭಟ್, ಗೋಪಾಲ ಶೆಟ್ಟಿ, ರಾಘವ ಬೆರಿಪದವು ಹಾಗೂ ಗಣೇಶ್ ಕುಮಾರ್ ದೇಲಂತಮಲು ಮಾತನಾಡಿ, ಸೇತುವೆಗಳ ಕಿರಿದಾದ ವಿನ್ಯಾಸದಿಂದ ಸಾರ್ವಜನಿಕರು ಅಪಾಯದ ನಡುವೆ ಸಂಚರಿಸುವಂತಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯ ವೇಳೆ ರಸ್ತೆಯಲ್ಲಿ ಮಿನಿ ಲಾರಿಗಳು ಸಂಚರಿಸುತ್ತಿದ್ದಂತೆ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನಾಕಾರರು ವಾಹನ ತಡೆ ನಡೆಸಿದರು. ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಮುಂದಾದಾಗ ಕೆಲವರು ಲಾರಿಯ ಮುಂದೆ ಮಲಗಿ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ಘಟನೆ ನಡೆಯಿತು.

ಸೇತುವೆ ಪಕ್ಕ ಕೆಂಪು ಕಲ್ಲು ರಾಶಿ ಹಾಕಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ನಡೆಯುತ್ತಿದೆ. ತಾತ್ಕಾಲಿಕ ಕ್ರಮಗಳ ಬದಲು ವೈಜ್ಞಾನಿಕ ರೀತಿಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಹೊಸ ಸೇತುವೆ ನಿರ್ಮಾಣವಾಗುವವರೆಗೆ ಎರಡೂ ಸೇತುವೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳು, ಎಚ್ಚರಿಕೆ ಫಲಕಗಳು, ಭದ್ರತಾ ತಡೆಗೋಡೆಗಳು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ತುರ್ತಾಗಿ ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯ ಉದ್ದೇಶ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದೇ ಹೊರತು ಸಾರ್ವಜನಿಕರಿಗೆ ತೊಂದರೆ ನೀಡುವುದಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಯತೀಶ್ ಪೆರುವಾಯಿ, ಮೋಕ್ಷಿತ್ ಪೆರುವಾಯಿ, ಪ್ರಭಾಕರ ಶೆಟ್ಟಿ, ವಿಷ್ಣು ಕನ್ನಡಗುಳಿ, ಎಸ್. ನಾರಾಯಣ, ಜಯರಾಮ ಆಳ್ವ, ಕೃಷ್ಣ ರಾಜೇಶ್ವರಿ, ಲಲಿತಾ ಅಶ್ವತ್ಥನಗರ, ಅಶೋಕ್ ಶೆಟ್ಟಿ, ಮಂಜುನಾಥ ಆಚಾರ್ಯ, ವಿನೀತ್ ಶೆಟ್ಟಿ, ಅಶೋಕ್ ಮಾಣಿಲ, ಪ್ರಕಾಶ್ಚಂದ್ರ ಶೆಟ್ಟಿ, ಶೇಖರ ಪೂಜಾರಿ, ರಾಘವ ಮಾಸ್ಟರ್, ಗಿರೀಶ್ ಪಾಟಾಳಿ, ಮನೋಜ್ ಆಚಾರ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ಅಧಿಕಾರಿಗಳಿಗೆ ಮನವಿ

ಬೆಳಗ್ಗಿನಿಂದಲೇ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು. ಬಳಿಕ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಇಂಜಿನಿಯರ್ ವೇಣುಗೋಪಾಲ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರಾನಾಥ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವಿನಾಶ್ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!