ಉಡುಪಿ, ಜೂ. 27: ಉಡುಪಿ ಜಿಲ್ಲೆಯ ಪರ್ಕಳದ ಕೆಳಪರ್ಕಳ ರಾಷ್ಟ್ರೀಯ ಹೆದ್ದಾರಿ (ಎನ್ಎಚ್–169ಎ)ಯ ಕೆನರಾ ಬ್ಯಾಂಕ್ ಸಮೀಪದ ತಿರುವಿನಲ್ಲಿ ಕಂಟೇನರ್ ಲಾರಿಯೊಂದು ಶನಿವಾರ ಬೆಳಗ್ಗೆ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಆತ್ರಾಡಿಯಿಂದ ಪೇಪರ್ ಬಾಕ್ಸ್ಗಳನ್ನು ತುಂಬಿಕೊಂಡು ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿ ಬಿದ್ದಿದೆ. ಅಪಘಾತದ ಪರಿಣಾಮ ಲಾರಿಯಿಂದ ಡೀಸೆಲ್ ಸೋರಿಕೆಯಾಗಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಲಾರಿಯನ್ನು ಮೇಲಕ್ಕೆತ್ತಿದರು.
ಪರ್ಕಳದ ಈ ತಿರುವಿನಲ್ಲಿ ಬೃಹತ್ ವಾಹನಗಳು ಆಗಾಗ್ಗೆ ಕೆಟ್ಟು ನಿಲ್ಲುವುದು ಹಾಗೂ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದ್ದು, ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ. ಎರಡು ದಿನಗಳ ಹಿಂದೆಯಷ್ಟೇ ಇದೇ ಏರು ರಸ್ತೆಯಲ್ಲಿ ಮತ್ತೊಂದು ಲಾರಿ ಕೆಟ್ಟು ನಿಂತ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ರೆಡಿ ಮಿಕ್ಸ್ ಚೆಲ್ಲಾಟದಿಂದ ಹೆಚ್ಚಿದ ಸಂಕಷ್ಟ
ಈ ಮಾರ್ಗದಲ್ಲಿ ಪ್ರತಿದಿನ ಸಂಚರಿಸುವ ರೆಡಿ ಮಿಕ್ಸರ್ ವಾಹನಗಳಿಂದ ಏರು ರಸ್ತೆಯಲ್ಲಿ ಕಾಂಕ್ರೀಟ್ ಮಿಶ್ರಣ (ರೆಡಿ ಮಿಕ್ಸ್) ಮತ್ತು ಜೆಲ್ಲಿ ಕಲ್ಲುಗಳು ರಸ್ತೆಗೆ ಚೆಲ್ಲುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆ ಮತ್ತಷ್ಟು ಜಾರುವಂತಾಗುತ್ತಿರುವುದರಿಂದ ಅಪಘಾತದ ಸಾಧ್ಯತೆ ಹೆಚ್ಚುತ್ತಿದೆ.
ಹಳೆ ರಸ್ತೆಯ ಅಭಿವೃದ್ಧಿಗೆ ಆಗ್ರಹ
ಈ ಭಾಗದಲ್ಲಿ ಮರುಮರು ಸಂಭವಿಸುತ್ತಿರುವ ಅಪಘಾತಗಳು ಹಾಗೂ ಸಂಚಾರ ಸಮಸ್ಯೆಗಳನ್ನು ಗಮನಿಸಿ, ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಬೃಹತ್ ವಾಹನ ಚಾಲಕರು ಹಾಗೂ ಮಾಲೀಕರಿಗೆ ಉಂಟಾಗುತ್ತಿರುವ ನಷ್ಟವನ್ನು ಪರಿಗಣಿಸಿ, ಪರ್ಯಾಯವಾಗಿ ಹಳೆಯ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.