ರಾಮ ಮಂದಿರ ಟ್ರಸ್ಟ್ ದೇಣಿಗೆ ಲೆಕ್ಕಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಿ: ಬಿ.ಕೆ. ಹರಿಪ್ರಸಾದ್ ಆಗ್ರಹ

ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರ ಟ್ರಸ್ಟ್‌ಗೆ ಉದ್ಯಮಿ ಮುಕೇಶ್ ಅಂಬಾನಿ ಸೇರಿದಂತೆ ವಿವಿಧ ದಾನಿಗಳಿಂದ ನೀಡಲಾಗಿರುವ ಕೋಟ್ಯಂತರ ರೂಪಾಯಿ ದೇಣಿಗೆಯ ಲೆಕ್ಕ ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ ಎಂದು ಆರೋಪಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, ಈ ಕುರಿತು ಹಾಲಿ ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ಟ್ರಸ್ಟ್‌ಗೆ ಸಂಬಂಧಿಸಿದ ದೇಣಿಗೆ ಹಾಗೂ ಅದರ ಬಳಕೆ ಕುರಿತಂತೆ ಪಾರದರ್ಶಕತೆ ಇರಬೇಕೆಂದು ಆಗ್ರಹಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು “ರಾಮ ಮಂದಿರ ಟ್ರಸ್ಟ್ ದೇಣಿಗೆಯ ಲೆಕ್ಕ ನೀಡುವ ಅಗತ್ಯವಿಲ್ಲ” ಎಂದು ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಹರಿಪ್ರಸಾದ್, “ಪ್ರಧಾನಿ ನರೇಂದ್ರ ಮೋದಿ ಅವರು ‘ನಾ ಖಾವೂಂಗಾ, ನಾ ಖಾನೇ ದೂಂಗಾ’ ಎಂದು ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡಿದ್ದರು. ಆದರೆ, ಈಗ ಕೇಂದ್ರ ಸಚಿವರು ಟ್ರಸ್ಟ್ ಲೆಕ್ಕ ನೀಡಬೇಕಾಗಿಲ್ಲ ಎಂದು ಹೇಳುತ್ತಿರುವುದು ಪ್ರಧಾನಿ ಘೋಷಿಸಿದ ಪಾರದರ್ಶಕ ಆಡಳಿತದ ತತ್ವಕ್ಕೆ ವಿರುದ್ಧವಾಗಿದೆ” ಎಂದು ಆರೋಪಿಸಿದರು.

“ರಾಮ ಮಂದಿರ ಟ್ರಸ್ಟ್‌ನ ಹಣಕಾಸಿನ ವಿವರಗಳನ್ನು ಕೇಳುತ್ತಿರುವುದು ಪ್ರಧಾನಿಯವರ ಕಚೇರಿಯೇ ಆಗಿದ್ದರೆ, ಟ್ರಸ್ಟ್ ಅದನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ದೊರಕಬೇಕಿದೆ. ಇಂತಹ ಬೆಳವಣಿಗೆಯನ್ನು ಸಮರ್ಥಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೂ ಈ ವಿಚಾರದಲ್ಲಿ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದಾರೆ” ಎಂದು ಅವರು ಹೇಳಿದರು.

ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಹರಿಪ್ರಸಾದ್, “ಇತಿಹಾಸದಲ್ಲಿ ಮೊಹಮ್ಮದ್ ಗಜ್ನಿ ದೇವಾಲಯಗಳನ್ನು ಲೂಟಿ ಮಾಡಿದ್ದನೆಂದು ಹೇಳಲಾಗುತ್ತದೆ. ಆದರೆ ಇಂದು ದೇವಾಲಯಗಳ ಸಂಪತ್ತಿನ ದುರುಪಯೋಗ ನಡೆಯುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಅದು ಯಾವ ದೇವಾಲಯ ಎಂಬುದು ಮುಖ್ಯವಲ್ಲ; ಅದು ನೋಂದಾಯಿತ ಟ್ರಸ್ಟ್ ಆಗಿರುವುದರಿಂದ ಸಾರ್ವಜನಿಕ ದೇಣಿಗೆಯ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿ ನೀಡಬೇಕಾದ ಜವಾಬ್ದಾರಿ ಟ್ರಸ್ಟ್‌ಗೆ ಇದೆ” ಎಂದು ಹೇಳಿದರು.

“ಸುಮಾರು 200 ಕೋಟಿ ರೂ. ದೇಣಿಗೆ ಹಣದ ಲೆಕ್ಕಾಚಾರ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಮೂಡಿವೆ. ಆ ಹಣದ ಬಳಕೆ ಹೇಗಾಯಿತು ಎಂಬುದನ್ನು ಸ್ವತಂತ್ರ ತನಿಖೆಯ ಮೂಲಕ ಬಹಿರಂಗಪಡಿಸಬೇಕು. ಇದರಿಂದ ಸತ್ಯಾಸತ್ಯತೆ ಹೊರಬರಲಿದೆ” ಎಂದು ಅವರು ಒತ್ತಾಯಿಸಿದರು.

“ಪ್ರಹ್ಲಾದ್ ಜೋಶಿಯವರಿಗೆ ಧೈರ್ಯವಿದ್ದರೆ, ರಾಮ ಮಂದಿರಕ್ಕೆ ಬಂದಿರುವ ದೇಣಿಗೆ ಹಣದ ಬಳಕೆ ಹಾಗೂ ಲೆಕ್ಕವನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು. ಪಾರದರ್ಶಕ ಆಡಳಿತದ ಬಗ್ಗೆ ಮಾತನಾಡುವವರು ಈ ವಿಚಾರದಲ್ಲೂ ಸ್ಪಷ್ಟನೆ ನೀಡಬೇಕು” ಎಂದು ಸವಾಲು ಹಾಕಿದರು.

ರಾಮ ಮಂದಿರ ಟ್ರಸ್ಟ್‌ನ ಸದಸ್ಯರಾಗಿರುವ ಪೇಜಾವರ ಶ್ರೀಗಳೂ ದೇಣಿಗೆಯ ಲೆಕ್ಕಪತ್ರಗಳ ಕುರಿತು ಪ್ರಶ್ನೆ ಎತ್ತಿರುವುದನ್ನು ಉಲ್ಲೇಖಿಸಿದ ಹರಿಪ್ರಸಾದ್, “ಆರ್‌ಎಸ್‌ಎಸ್ ಸೇರಿದಂತೆ ಎಲ್ಲಾ ನೋಂದಾಯಿತ ಸಂಸ್ಥೆಗಳು ಕಾನೂನಿನ ವ್ಯಾಪ್ತಿಯಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಹಾಗಿದ್ದರೆ ಪೇಜಾವರ ಶ್ರೀಗಳು ವ್ಯಕ್ತಪಡಿಸಿರುವ ಪ್ರಶ್ನೆಗಳಿಗೂ ಉತ್ತರ ಸಿಗಬೇಕು” ಎಂದು ಹೇಳಿದರು.

ರಾಮ ಮಂದಿರ ಟ್ರಸ್ಟ್‌ಗೆ ಬಂದಿರುವ ದೇಣಿಗೆ ಹಾಗೂ ಅದರ ವೆಚ್ಚದ ಕುರಿತು ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರ ಮುಂದಿಡುವ ಮೂಲಕ ಅನುಮಾನಗಳಿಗೆ ತೆರೆ ಎಳೆಯಬೇಕು ಎಂದು ಅವರು ಆಗ್ರಹಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!