ಬೆಳಗಾವಿ, ಜೂನ್ 30: ವಿವಾಹಿತ ಮಹಿಳೆಯೊಬ್ಬರು ಯುವಕನೊಂದಿಗೆ ಪರಾರಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗುಂಪೊಂದು ಯುವಕನ ಮನೆಯ ಮೇಲೆ ದಾಳಿ ನಡೆಸಿ ಮನೆ ಧ್ವಂಸಗೊಳಿಸಿರುವ ಘಟನೆ ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ಘಟನೆ ಬಳಿಕ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಂತ್ರಸ್ತ ಕುಟುಂಬವು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

ಮಾಹಿತಿಯ ಪ್ರಕಾರ, ಗ್ರಾಮದ ನಾಗವ್ವ ಎಂಬ ವಿವಾಹಿತೆ ಕಳೆದ ಎರಡು ದಿನಗಳ ಹಿಂದೆ ಯಲ್ಲಪ್ಪ ನಾಯಕ ಎಂಬ ಯುವಕನೊಂದಿಗೆ ಪರಾರಿಯಾಗಿರುವುದಾಗಿ ಹೇಳಲಾಗಿದೆ. ನಾಗವ್ವ ಕಳೆದ ವರ್ಷ ಬಸಪ್ಪ ನಾಯಕ ಅವರನ್ನು ವಿವಾಹವಾಗಿದ್ದರು. ಬಸಪ್ಪ ನಾಯಕ ಹಾಗೂ ಯಲ್ಲಪ್ಪ ನಾಯಕ ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.


ಈ ಘಟನೆಗೆ ಆಕ್ರೋಶಗೊಂಡ ನಾಗವ್ವ ಅವರ ಪೋಷಕರು, ಪತಿ ಬಸಪ್ಪ ನಾಯಕನ ಕುಟುಂಬಸ್ಥರು ಹಾಗೂ ಸಂಬಂಧಿಕರು ಸೇರಿದಂತೆ ಗುಂಪೊಂದು ಯಲ್ಲಪ್ಪ ನಾಯಕ ಅವರ ಮನೆಯ ಮೇಲೆ ದಾಳಿ ನಡೆಸಿದ ಆರೋಪ ಕೇಳಿಬಂದಿದೆ. ದಾಳಿಕೋರರು ಮನೆಯ ಹಂಚುಗಳನ್ನು ಒಡೆದು, ಟಿವಿ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಧ್ವಂಸಗೊಳಿಸಿದ್ದು, ಮನೆಗೆ ಭಾರೀ ಹಾನಿ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದಾಳಿ ವೇಳೆ ಮನೆಯಲ್ಲಿದ್ದ ಯಲ್ಲಪ್ಪ ನಾಯಕ ಅವರ ಪೋಷಕರು ಜೀವಭಯದಿಂದ ಸ್ಥಳದಿಂದ ಪರಾರಾಗಿ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.ಇದೇ ವೇಳೆ, ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಹಾಗೂ ಸುಮಾರು 25 ಕುರಿಗಳನ್ನು ದೋಚಿಕೊಂಡು ಹೋಗಿರುವ ಆರೋಪವನ್ನೂ ಸಂತ್ರಸ್ತ ಕುಟುಂಬ ಮಾಡಿದೆ. ಈ ಘಟನೆಯಿಂದ ತಾವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ನ್ಯಾಯ ಒದಗಿಸುವಂತೆ ಕುಟುಂಬ ಮನವಿ ಮಾಡಿದೆ.

ಘಟನೆಗೆ ಸಂಬಂಧಿಸಿ ಸಂತ್ರಸ್ತ ಕುಟುಂಬವು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಾಳಿಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

