ಮೋದಿ ಸರ್ಕಾರದ 12 ವರ್ಷಗಳ ಸಾಧನೆ ಕುರಿತು ಚರ್ಚೆ; ಕರಾವಳಿ ರಾಜಕೀಯದ ಹಿರಿಯ ನಾಯಕನ ಸ್ಮರಣೆ
ಉಡುಪಿ, ಜು. 2: ಮೌಲ್ಯಾಧಾರಿತ ರಾಜಕಾರಣದ ರೂವಾರಿ ಹಾಗೂ ಉಡುಪಿ ಅಭಿವೃದ್ಧಿಯ ಹರಿಕಾರ ದಿವಂಗತ ಡಾ. ವಿ.ಎಸ್. ಆಚಾರ್ಯ ಅವರ ನಿವಾಸಕ್ಕೆ ಉಡುಪಿ–ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ‘ವಿಶ್ವಾಸ, ವಿಕಾಸ ಮತ್ತು ಜನ ಕಲ್ಯಾಣ’ ಸಾಧನೆಯ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಡಾ. ವಿ.ಎಸ್. ಆಚಾರ್ಯ ಅವರ ಧರ್ಮಪತ್ನಿ ಶ್ರೀಮತಿ ಶಾಂತಾ ವಿ. ಆಚಾರ್ಯ ಅವರನ್ನು ಕಿಶೋರ್ ಕುಮಾರ್ ಪುತ್ತೂರು ಅವರು ಸನ್ಮಾನಿಸಿ ಆಶೀರ್ವಾದ ಪಡೆದರು.

ಭೇಟಿಯ ವೇಳೆ ಕೇಂದ್ರ ಸರ್ಕಾರದ ಜನಕಲ್ಯಾಣ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಯಿತು.
ಡಾ. ವಿ.ಎಸ್. ಆಚಾರ್ಯ ಅವರನ್ನು ಸ್ಮರಿಸಿದ ಶಾಸಕರು, ಅವರು ಕರಾವಳಿಯಲ್ಲಿ ಜನಸಂಘ ಮತ್ತು ಬಿಜೆಪಿ ಪಕ್ಷವನ್ನು ಬಲಪಡಿಸಿದ ಧೀಮಂತ ನಾಯಕನಾಗಿದ್ದು, 1968ರಲ್ಲಿ ಉಡುಪಿ ಪುರಸಭೆಯಲ್ಲಿ ಕಮಲ ಅರಳಿಸುವ ಮೂಲಕ ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಪ್ರಥಮ ಬಾರಿಗೆ ಅಧಿಕಾರ ತಂದುಕೊಟ್ಟ ಇತಿಹಾಸ ನಿರ್ಮಿಸಿದ್ದರು ಎಂದು ಹೇಳಿದರು.
ಅವರು ಶಿಸ್ತು, ಸರಳತೆ ಹಾಗೂ ಭ್ರಷ್ಟಾಚಾರರಹಿತ ಆಡಳಿತದ ಮೂಲಕ ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ಗುರುತು ಮೂಡಿಸಿದ ನಾಯಕರಾಗಿದ್ದರು. ಉಡುಪಿಯ ಮೂಲಸೌಕರ್ಯ ಅಭಿವೃದ್ಧಿಗೆ ನೀಡಿದ ಕೊಡುಗೆಗಳು, ಕಾಂಕ್ರೀಟ್ ರಸ್ತೆಗಳ ಹಾಗೂ ಒಳಚರಂಡಿ (UGD) ವ್ಯವಸ್ಥೆಯಂತಹ ಯೋಜನೆಗಳು ಇಂದಿಗೂ ಮಾದರಿಯಾಗಿವೆ ಎಂದು ಅವರು ಸ್ಮರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ನಗರ ಅಧ್ಯಕ್ಷ ದಿನೇಶ್ ಅಮೀನ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಕಪ್ಪೆಟ್ಟು, ಉಪಾಧ್ಯಕ್ಷ ಕಿಶೋರ್ ಕರಂಬಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


