ಮುಗುಳಿಗುಡ್ಡೆ ಶ್ರೀ ಕ್ಷೇತ್ರ ಸಂವರ್ಧನೆಗಾಗಿ 13 ಕಿ.ಮೀ. ಭಕ್ತಿಪೂರ್ಣ ಪಾದಯಾತ್ರೆ

ಕನ್ಯಾನ, ಜುಲೈ 6: ಮುಗುಳಿಗುಡ್ಡೆ ಶ್ರೀ ಕ್ಷೇತ್ರ ಸಂವರ್ಧನಾ ಸಮಿತಿ, ವಿಟ್ಲ ಅರಮನೆಯ ಶ್ರೀ ಬಂಗಾರು ಅರಸರ ಗೌರವಾಧ್ಯಕ್ಷತೆಯಲ್ಲಿ ಆಯೋಜಿಸಿದ್ದ ‘ವಿಟ್ಲ ಪಂಚಲಿಂಗೇಶ್ವರನ ನಡೆಗೆ ನಮ್ಮ ನಡೆ’ ಪಾದಯಾತ್ರೆ ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ಉತ್ಸಾಹದೊಂದಿಗೆ ನೆರವೇರಿತು.

ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಭಕ್ತರು 13 ಕಿಲೋಮೀಟರ್‌ಗಳ ದೂರವನ್ನು ಬರಿಗಾಲಿನಲ್ಲಿ ಕ್ರಮಿಸಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ತಲುಪಿದರು. ಬಳಿಕ ಶ್ರೀ ಪಂಚಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ ನೆರವೇರಿಸಿ, ಮುಗುಳಿಗುಡ್ಡೆ ಶ್ರೀ ಕ್ಷೇತ್ರವು ತನ್ನ ಪುರಾತನ ವೈಭವದೊಂದಿಗೆ ಸಂವರ್ಧನೆಗೊಂಡು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲಿ ಎಂಬ ಸಂಕಲ್ಪದೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಭದ್ರದೀಪ ಸಮರ್ಪಣೆ ಹಾಗೂ ಸುಮಾರು 500ಕ್ಕೂ ಅಧಿಕ ಭಕ್ತರಿಂದ ಮುಷ್ಟಿಕಾಣಿಕೆ ಸಮರ್ಪಣೆ ಕ್ಷೇತ್ರದ ತಂತ್ರಿವರ್ಯ ಕುಂಟು ಕುಡೇಲು ಬ್ರಹ್ಮಶ್ರೀ ನವೀನ್ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು.

ಪಾದಯಾತ್ರೆಯ ಸಂದರ್ಭದಲ್ಲಿ ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ಮಾತೃ ಮಂಡಳಿ, ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ಹಾಗೂ ಯುವಶಕ್ತಿ ಫ್ರೆಂಡ್ಸ್ ಅಂಗ್ರಿ ದೇಲಂತಬೆಟ್ಟು ವತಿಯಿಂದ ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಆನೆಪದವು ಶ್ರೀ ಮಹಮ್ಮಾಯಿ ಭಜನಾ ಮಂದಿರದ ವತಿಯಿಂದ ಭಾಸ್ಕರ್ ಮಡೆಯಾಲ ಅವರ ನೇತೃತ್ವದಲ್ಲಿ ಲಘು ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸುರೇಶ್ ಬನಾರಿ ಅವರ ಪ್ರಾಯೋಜಕತ್ವದಲ್ಲಿ ಅನ್ನಪ್ರಸಾದ ವಿತರಣೆ ನಡೆಯಿತು.

ಪಾದಯಾತ್ರೆಯುದ್ದಕ್ಕೂ ಶಿವನಾಮಸ್ಮರಣೆ ಹಾಗೂ ಮುಗುಳಿಗುಡ್ಡೆ ಶ್ರೀ ಕ್ಷೇತ್ರ ಮಾತೃ ಮಂಡಳಿಯ ನೇತೃತ್ವದಲ್ಲಿ ನಡೆದ ಭಜನಾ ಸಂಕೀರ್ತನೆ ಭಕ್ತರ ಗಮನ ಸೆಳೆಯಿತು. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕ ವೃಂದ ಹಾಗೂ ಸಿಬ್ಬಂದಿಯ ಆತ್ಮೀಯ ಆತಿಥ್ಯದಿಂದ ಪಾದಯಾತ್ರಿಗಳು ದೈವಾನುಭೂತಿಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!