ಸಂಡೇ ಬಜಾರ್ ತೆರವು ಕಾರ್ಯಾಚರಣೆಗೆ ವ್ಯಾಪಾರಿಗಳ ಪ್ರತಿಭಟನೆ


ಪುರಭವನದ ಬಳಿ ರಸ್ತೆ ತಡೆ ನಡೆಸಿದ ಬೀದಿ ವ್ಯಾಪಾರಿಗಳು; ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಆಗ್ರಹ

ಮಂಗಳೂರು, ಜುಲೈ 6: ನಗರದ ಪುರಭವನದ ಬಳಿ ಭಾನುವಾರದ ರಜಾದಿನ ನಡೆಯುವ ಸಂಡೇ ಬಜಾರ್ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ ಭಾನುವಾರವೂ ತೆರವು ಕಾರ್ಯಾಚರಣೆ ಮುಂದುವರಿಸಿದ್ದು, ಇದನ್ನು ವಿರೋಧಿಸಿ ಬೀದಿ ವ್ಯಾಪಾರಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ವ್ಯಾಪಾರಿಗಳು ಅಂಗಡಿ ಆರಂಭಿಸಲು ಮುಂದಾಗುತ್ತಿದ್ದಂತೆ ಪಾಲಿಕೆ ಆಯುಕ್ತರ ಸೂಚನೆಯಂತೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವ್ಯಾಪಾರಿಗಳು, ಪಾದಚಾರಿಗಳ ಸಂಚಾರಕ್ಕೆ ಸಾಕಷ್ಟು ಸ್ಥಳಾವಕಾಶ ಇದ್ದರೂ ತೆರವುಗೊಳಿಸುವುದು ನ್ಯಾಯಸಮ್ಮತವಲ್ಲ ಎಂದು ಆರೋಪಿಸಿದರು.

ಕಾರ್ಯಾಚರಣೆ ಮುಂದುವರಿದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಘೋಷಣೆಗಳನ್ನು ಕೂಗಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್, “ಬೀದಿ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಿಸುವ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸದೆ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸುತ್ತಿರುವುದು ಖಂಡನೀಯ. ಬಡ ವ್ಯಾಪಾರಿಗಳ ವಿರುದ್ಧ ಹಠಮಾರಿ ಧೋರಣೆ ಅನುಸರಿಸಲಾಗುತ್ತಿದೆ” ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ಪಾಲಿಕೆ ಅಧಿಕಾರಿಗಳು ಮಾನವೀಯತೆ ಇಲ್ಲದೆ ಬಡ ವ್ಯಾಪಾರಿಗಳ ಸರಕುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು” ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬೀದಿಬದಿ ವ್ಯಾಪಾರಿ ಸಂಘಟನೆಗಳ ಪ್ರಮುಖರಾದ ಮುಜಾಫರ್ ಅಹ್ಮದ್, ಸಂತೋಷ್ ಆರ್.ಎಸ್., ಮೊಹಮ್ಮದ್ ಮುಸ್ತಫಾ, ಅಬ್ದುಲ್ ರಹಿಮಾನ್ ಅಡ್ಯಾರ್, ವಿಜಯ್ ಜೈನ್, ಹಂಝ ಮೊಹಮ್ಮದ್, ಎಂ.ಎನ್. ಶಿವಪ್ಪ, ನೌಶಾದ್ ಉಳ್ಳಾಲ, ಶಿವಾನಂದ ನಾಯ್ಕ್, ಪಕೀರ ನಾಯ್ಕ್, ನಾಗರಾಜ್, ಹನುಮಂತ, ಜ್ಯೋತಿಬಾಯಿ, ಲಕ್ಕಮ್ಮ, ಸಯ್ಯದ್ ಸಾದಿಕ್, ಅಶ್ರಫ್, ನೌಶಾದ್ ಕಣ್ಣೂರು, ರಫೀಕ್ ಪಾಂಡೇಶ್ವರ ಹಾಗೂ ಜನವಾದಿ ಮಹಿಳಾ ಸಂಘಟನೆಯ ನಗರ ಕಾರ್ಯದರ್ಶಿ ಯೋಗೀತಾ ಸುವರ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!