ರಾಂಗ್ ಸೈಡ್‌ನಲ್ಲಿ ಬಂದ ಬೈಕ್‌ಗೆ ಕಾರು ಡಿಕ್ಕಿ; ಪುತ್ತೂರಿನ ಅಶೋಕ್ ಮೃತ
ಬಂಟ್ವಾಳ, ಜುಲೈ 6: ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್–ಕಲ್ಲಡ್ಕ ನಡುವಿನ ನರಹರಿ ಪರ್ವತದ ಸಮೀಪ ಮಾರುತಿ ಸ್ವಿಫ್ಟ್ ಡಿಸೈರ್ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ.
ಮೃತರನ್ನು ಪುತ್ತೂರು ನಿವಾಸಿ ಅಶೋಕ್ (34) ಎಂದು ಗುರುತಿಸಲಾಗಿದೆ.


ಪೊಲೀಸ್ ಮೂಲಗಳ ಪ್ರಕಾರ, ಬಿ.ಸಿ.ರೋಡ್ ಕಡೆಗೆ ತೆರಳುತ್ತಿದ್ದ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿಗೆ, ಎದುರು ದಿಕ್ಕಿನಿಂದ ಏಕಮುಖ ಸಂಚಾರ ನಿಯಮ ಉಲ್ಲಂಘಿಸಿ ರಾಂಗ್ ಸೈಡ್‌ನಲ್ಲಿ ಬಂದ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಹೆದ್ದಾರಿಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿದ್ದರೂ ಬೈಕ್ ಸವಾರ ನಿಯಮ ಉಲ್ಲಂಘಿಸಿ ಸಂಚರಿಸಿದ್ದೇ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗದ ಬಾನೆಟ್, ಗ್ರಿಲ್ ಹಾಗೂ ಇಂಜಿನ್ ಭಾಗ ಸಂಪೂರ್ಣ ಜಜ್ಜುಗುಜ್ಜಾಗಿದ್ದು, ಮುಂಭಾಗದ ವಿಂಡ್‌ಶೀಲ್ಡ್ ಗಾಜು ಪುಡಿಯಾಗಿದೆ. ಬೈಕ್‌ನ ಮುಂಭಾಗವೂ ಸಂಪೂರ್ಣ ನುಚ್ಚುನೂರಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಶೋಕ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಚಾರ ಸುಗಮಗೊಳಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


