ಹಲವೆಡೆ ಮನೆಗಳ ಮೇಲೆ ಮರ ಬಿದ್ದು ಹಾನಿ; ಯಾವುದೇ ಪ್ರಾಣಾಪಾಯವಿಲ್ಲ
ಬಂಟ್ವಾಳ, ಜುಲೈ 6: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ-ಮಳೆಯ ಪರಿಣಾಮ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳು ಹಾಗೂ ಅಡಿಕೆ ತೋಟಗಳಿಗೆ ಹಾನಿಯಾಗಿದೆ. ಹಲವೆಡೆ ಮನೆಗಳ ಮೇಲೆ ಮರಗಳು ಬಿದ್ದು ಭಾಗಶಃ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನರಿಕೊಂಬು ಗ್ರಾಮದ ಕಲ್ಯಾಣ ಅಗ್ರಾರದಲ್ಲಿ ಸಂಜೀವ ಪೂಜಾರಿ ಅವರ ಪಕ್ಕಾ ಮನೆಗೆ ಗಾಳಿ-ಮಳೆಯಿಂದ ತೀವ್ರ ಹಾನಿಯಾಗಿದೆ. ಇದೇ ಗ್ರಾಮದ ಪೊಯಿತ್ತಾಜೆಯಲ್ಲಿ ಫೆಲಿಕ್ಸ್ ಡಿಸಿಲ್ವ ಹಾಗೂ ಯೋಗೀಶ್ ಅವರ ಅಡಿಕೆ ತೋಟಗಳಿಗೂ ಹಾನಿಯಾಗಿದೆ.

ಕದೇಶ್ವಲ್ಯ ಗ್ರಾಮದ ಕೆಮ್ಮಣ್ಣಿನಲ್ಲಿ ಉಸ್ಮಾನ್ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಬಡಗಕಜೆಕಾರು ಗ್ರಾಮದ ಮಡವಿನಲ್ಲಿ ಮೀನಾಕ್ಷಿ ಅವರ ಮನೆಗೂ ಗಾಳಿಯಿಂದ ಹಾನಿಯಾಗಿದೆ.
ಶಂಭೂರು ಗ್ರಾಮದ ಕೊಪ್ಪಳದಲ್ಲಿ ವಾರಿಜಾಕ್ಷಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಪಂಜಿಕಲ್ಲು ಗ್ರಾಮದ ಏನಿಲಕೋಡಿ ಮನೆಯಲ್ಲಿ ಕಿಶೋರ್ ಅವರ ಮನೆಗೂ ಗಾಳಿ-ಮಳೆಯಿಂದ ಹಾನಿಯಾಗಿದೆ. ಪಿಲಿಮೊಗರು ಗ್ರಾಮದ ಕೊಪ್ಪಳದಲ್ಲಿ ಚಂದ್ರಹಾಸ್ ಅವರ ಮನೆಯೂ ಗಾಳಿ-ಮಳೆಗೆ ಹಾನಿಗೊಳಗಾಗಿದೆ.
ಎಲ್ಲಾ ಘಟನೆಗಳಲ್ಲೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿಯ ಪ್ರಮಾಣದ ವರದಿ ಸಿದ್ಧಪಡಿಸಿ ಸರ್ಕಾರದ ನಿಯಮಾನುಸಾರ ಪರಿಹಾರ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.


