ಬಂಟ್ವಾಳ | ಜು. 9: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಹೊರಾಂಗಣದ ಮುಂಭಾಗದಲ್ಲಿ ನಿರ್ಮಾಣಗೊಳ್ಳಲಿರುವ ಮೇಲ್ಛಾವಣಿ ಕಾಮಗಾರಿಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶಿಲಾನ್ಯಾಸ ನೆರವೇರಿತು.
ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಅವರು ಪೂಜಾ ವಿಧಿ ನೆರವೇರಿಸಿದರು. ಬಳಿಕ ಮಾತನಾಡಿದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಕ್ಷೇತ್ರದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆದಿದ್ದು, ಇದೀಗ ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ಕ್ಷೇತ್ರದ ಸೇವೆಯಲ್ಲಿ ತೊಡಗಿರುವ ಪ್ರತಿಯೊಬ್ಬರ ಮೇಲೂ ದೇವರ ಅನುಗ್ರಹವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಣಿನಾಲ್ಕೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಧಾಕೃಷ್ಣ ಮಯ್ಯ ಕೈಯೊಟ್ಟು, ಪ್ರಗತಿಪರ ಕೃಷಿಕ ಸುರೇಶ್ ಶೆಟ್ಟಿ ನಡುಮೊಗರು, ನಾಣ್ಯಪ್ಪ ಪೂಜಾರಿ ಪಡ್ಡಾಯೂರು, ಶಂಭೂರು ಎಎಂಆರ್ ಪವರ್ ಪ್ರಾಜೆಕ್ಟ್‌ನ ಎಚ್‌ಆರ್ ಮ್ಯಾನೇಜರ್ ಸುನೀಲ್ ಶೆಟ್ಟಿ ಹಾಗೂ ಪ್ಲಾಂಟ್ ಮ್ಯಾನೇಜರ್ ಭಾಗ್ಯರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ನಿರ್ಮಾಣ ಸಂಸ್ಥೆಯ ಪರವಾಗಿ ಕೆ.ಟಿ. ಪೂಜಾರಿ ಹಾಗೂ ಸಿವಿಲ್ ಎಂಜಿನಿಯರ್ ಶರತ್ ಅವರಿಗೆ ನಿರ್ಮಾಣ ಕಾರ್ಯ ಆರಂಭದ ಸಂಕೇತವಾಗಿ ವೀಳ್ಯ ನೀಡಲಾಯಿತು.
ದೇವಸ್ಥಾನದ ಆಡಳಿತ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಾಧಾಕೃಷ್ಣ ರೈ ಕೊಟ್ಟುಂಜ ಸ್ವಾಗತಿಸಿ ವಂದಿಸಿದರು.


