ಸುಳ್ಯ: ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಅವರು ಮದುವೆ ಸಂದರ್ಭದಲ್ಲಿ ತಂದೆ ನೀಡಿದ್ದ ಚಿನ್ನಾಭರಣ ಹಾಗೂ ಆಸ್ತಿಯನ್ನು ಕಬಳಿಸಿ ತನಗೂ ಮಕ್ಕಳಿಗೂ ಅನ್ಯಾಯ ಮಾಡಿದ್ದಾರೆ ಎಂದು ಅವರ ಪತ್ನಿ ಶಮಾ ಶಹೀದ್ ಆರೋಪಿಸಿದ್ದಾರೆ.
ಸುಳ್ಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆ ವೇಳೆ ತಂದೆ ನೀಡಿದ್ದ 110 ಪವನ್ ಚಿನ್ನ ಹಾಗೂ ತಮ್ಮ ಹೆಸರಿನ ಆಸ್ತಿಯನ್ನು ಪತಿ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಕುರಿತು ಪ್ರಶ್ನಿಸಿದಾಗ, “ನೀನು ಸಿಎಂ ಅಥವಾ ಪಿಎಂ ಬಳಿಗೆ ಹೋದರೂ ನನ್ನ ವಿರುದ್ಧ ಏನೂ ಮಾಡಲು ಸಾಧ್ಯವಿಲ್ಲ” ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.

25 ವರ್ಷಗಳ ಹಿಂದೆ ವಿವಾಹವಾಗಿದ್ದು, ಕಳೆದ ಒಂಬತ್ತು ವರ್ಷಗಳಿಂದ ತವರು ಮನೆ ಕಾಸರಗೋಡಿನಲ್ಲಿ ವಾಸಿಸುತ್ತಿದ್ದೇನೆ. ವಿಚ್ಛೇದನ ಸಂಬಂಧ ಪ್ರಕರಣ ಕಾಸರಗೋಡು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಇಸ್ಲಾಮಿಕ್ ಸಂಪ್ರದಾಯದಂತೆ ತಲಾಕ್ ಪ್ರಕ್ರಿಯೆಯೂ ಮುಂದುವರಿದಿದೆ ಎಂದು ತಿಳಿಸಿದರು.
ಅರಂತೋಡುದಲ್ಲಿರುವ ತಮ್ಮ ಹೆಸರಿನ ಆಸ್ತಿ ಹಾಗೂ ತೆಕ್ಕಿಲ್ ಗ್ಯಾಸ್ ಏಜೆನ್ಸಿ ವ್ಯವಹಾರದಲ್ಲಿ ಅವ್ಯವಹಾರ ನಡೆದಿದೆ. ಏಜೆನ್ಸಿಯಿಂದ ಇದುವರೆಗೆ ಯಾವುದೇ ಲಾಭಾಂಶ ದೊರೆತಿಲ್ಲ. ತಮ್ಮ ಹೆಸರಿನ ಕಟ್ಟಡದ ಬಾಡಿಗೆ ಹಣವನ್ನೂ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಈ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವೇಳೆ ₹75 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದರೂ, ₹25 ಲಕ್ಷ ಮಾತ್ರ ಪಾವತಿಸಲಾಗಿದೆ. ಉಳಿದ ಹಣ ಇನ್ನೂ ನೀಡಿಲ್ಲ. ಪ್ರಸ್ತುತ ಚಿನ್ನದ ಮೌಲ್ಯವೂ ₹1 ಕೋಟಿಗೂ ಅಧಿಕವಾಗಿದ್ದು, ತನ್ನ ಹಕ್ಕಿನ ಆಸ್ತಿ ಮತ್ತು ಚಿನ್ನವನ್ನು ಮರಳಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ತಮ್ಮ ಮಕ್ಕಳ ಶಿಕ್ಷಣ ಹಾಗೂ ಜೀವನ ನಿರ್ವಹಣೆಗೆ ತೀವ್ರ ತೊಂದರೆಯಾಗಿದ್ದು, ಈ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಶಮಾ ಶಹೀದ್ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

