ಕೋರಿಯಾರ್ ಸೇತುವೆ ನಿರ್ಮಾಣಕ್ಕೆ ೩೦ ಕೋಟಿ ರೂ ಮಂಜೂರು: ಶಾಸಕಿ ಭಾಗೀರಥಿ ಮುರುಳ್ಯ

ಕಡಬ ತಾಲೂಕಿನ ೧೦೨ ನೇ ನೆಕ್ಕಿಲಾಡಿ ಗ್ರಾಮದ ಕೋರಿಯಾರ್ ಎಂಬಲ್ಲಿ ಕುಮಾರಾಧಾರ ನದಿಗೆ ಸರ್ವಋತು ಸೇತುವೆ ನಿರ್ಮಾಣಕ್ಕಾಗಿ ರಾಜ್ಯ ಸರಕಾರ ಲೋಕೋಪಯೋಗಿ ಇಲಾಖಾ ಮುಖಾಂತರ ೩೦ ಕೋಟಿ ರೂ ಮಂಜೂರುಗೊಳಿಸಿದೆ, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.


ಅವರು ಬುಧವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೋರಿಯಾರ್ ನಿಂದ ಸಂಸದರ ಆದರ್ಶ ಗ್ರಾಮ ಬಳ್ಪವನ್ನು ಸಂಪರ್ಕಿಸುವ ಈ ಸೇತುವೆ ನಿರ್ಮಾಣವಾಗಬೇಕು ಎಂದು ಕಳೆದ ಹತ್ತಾರು ವರ್ಷಗಳಿಂದ ಈ ಭಾಗದ ಜನತೆ ಅಹವಾಲು ಸಲ್ಲಿಸುತ್ತಾ ಬಂದಿದ್ದು, ಸೇತುವೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ ಎಂದರು.


ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿರುವಾಗ ಅಂದಿನ ಶಾಸಕ ಎಸ್.ಅಂಗಾರ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮುತುವರ್ಜಿಯಲ್ಲಿ ಕಡಬ ತಾಲೂಕಿನಲ್ಲಿ ಹಲವು ಸೇತುವೆಗಳು ನಿರ್ಮಾಣವಾಗಿವೆ. ಕಡಬ ತಾಲೂಕನ್ನು ಸಂಪರ್ಕಿಸುವ ಗುಂಡ್ಯ ಹೊಳೆಗೆ ಕೊಣಾಜೆಯಲ್ಲಿ ಹಾಗೂ ಕುಮಾರಾಧಾರ ನದಿಗೆ ಪಾಲೋಳಿಯಲ್ಲಿ ಬೃಹತ್ ಸೇತುವೆ ನಿರ್ಮಾಣವಾಗಿದೆ. ಮಾಜಿ ಶಾಸಕ ಅಂಗಾರ ಅವರು ಕೋರಿಯಾರ್‌ನಲ್ಲಿ ಸೇತುವೆ ನಿರ್ಮಾಣಕ್ಕೆ ಮನವಿ ಮಾಡಿ ಸರಕಾರದ ಗಮನ ಸೆಳೆದಿದ್ದರು. ನಾನು ೨೦೨೪ ರಲ್ಲಿ ಶಾಸಕಿಯಾದ ಬಳಿಕ ಮತ್ತೆ ಮನವಿ ಮಾಡಿ ಸರಕಾರದ ಗಮನಕ್ಕೆ ತಂದಿದ್ದೆ, ಕಳೆದ ಆರ್ಥಿಕ ಸಮಸ್ಯೆಯಿಂದಾಗಿ ಮಂಜೂರಾತಿ ಆಗಿಲ್ಲ. ಮತ್ತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಈ ಹಿಂದಿನ ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿ ಒತ್ತಡ ಹೇರಿದ್ದೆನೆ, ಈಗ ಸರಕಾರ ಅನುದಾನ ಮಂಜೂರು ಮಾಡಿದೆ, ಇದಕ್ಕಾಗಿ ಸಚಿವರು ಹಾಗೂ ಸರಕಾರಕ್ಕೆ ಅಭಿನಂದೆ ಸಲ್ಲಿಸುತ್ತೇನೆ ಎಂದು ಹೇಳಿದ ಶಾಸಕರು ಕೋರಿಯಾರ್ ನಲ್ಲಿ ಬೃಹತ್ ಸೇತುವೆ ನಿರ್ಮಾಣದೊಂದಿಗೆ ಮಜ್ಜಾರುಕಡವಿನಲ್ಲಿ ಕಿಂಡಿ ಅಣೆಕಟ್ಟೆಯೊಂದಿಗೆ ಸೇತುವೆ ನಿರ್ಮಾಣಕ್ಕೆ ಸುಮಾರು ೩೦ ಕೋಟಿ ರೂನ ಯೋಜನೆಯ ಅಂದಾಜುಪಟ್ಟಿ ಸರಕಾರಕ್ಕೆ ಸಲ್ಲಿಸಲಾಗಿದೆ. ಅನುದಾನ ಬಿಡಗುಡೆಗೆ ಪ್ರಾಮಾಣಿಕ ಪ್ರಯತ್ನ ಸಾಗುತ್ತಿದೆ ಎಂದರು.


ನಾನು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವುದಾಗಿ ಸ್ಥಳೀಯ ಕಡಬದ ಕಾಂಗ್ರೇಸ್ ಮುಖಂಡರು ಆರೋಪಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಶಾಸಕರಿಗೆ ಸಿಗುವ ವಿಶೇಷ ಅನುದಾನ ೨೫ ಕೋಟಿ ರೂ ನಲ್ಲಿ ಆರು ಕೋಟಿ ರೂ.ವನ್ನು ತಮ್ಮ ವಿವೇಚನೆಯಲ್ಲಿ ನೀಡಲು ನಿಯಮಾವಳಿಯಲ್ಲಿ ಅವಕಾಶವಿದೆ. ಇದು ಎಲ್ಲಾ ಶಾಸಕರಿಗೆ ಇರುವ ಅಧಿಕಾರ, ಹಾಗಾಗಿ ನಾನು ನನ್ನ ವಿವೇಚನೆಯಲ್ಲಿ ಕೆಲವು ವಿದ್ಯಾರ್ಥಿಗಳ ಸಂಖ್ಯೆಯ ಅನುಗುಣವಾಗಿ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಿರುವುದು ನಿಜ ಇದರಲ್ಲಿ ತಪ್ಪು ಕಂಡುಹುಡುಕುವುದು ಸರಿಯಲ್ಲ. ಸರಕಾರಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ, ಚರ್ಚ್ನ ಆವರಣ ಗೋಡೆ ನಿರ್ಮಾಣಕ್ಕೆ, ಮಸೀದಿಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಯವುದೇ ತಾರತಮ್ಯವೆಸಗಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ಮೇದಪ್ಪ ಗೌಡ ಡೆಪ್ಪುಣಿ, ಪ್ರದೀಪ್ ರೈ ಮನವಳಿಕೆ, ಗಣೇಶ್ ಉದನಡ್ಕ, ಹರ್ಷಿತ್ ಕಾರ್ಜಾ, ಧರ್ಮಪಾಲ ಕಣ್ಕಲ್, ವಿನೋದ್ ಬೋಳ್ಮಳೆ, ಪ್ರಕಾಶ್ ಎನ್.ಕೆ., ಸುರೇಶ್ ದೇಂತಾರು, ಅಶೋಕ್ ಕುಮಾರ್ ಪಿ., ಸತೀಶ್ ಕರ್ಮೆಣ, ದೇವರಾಜ್ ಕೊಠಾರಿ, ಅಭಿಲಾಷ್ ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!