ಮೂಡುಬಿದಿರೆ: ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ನೇತೃತ್ವದ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ 7ನೇ ಶಾಖೆ ಸೆ.7ರಂದು ಮೂಡುಬಿದಿರೆಯ ಸರಕಾರಿ ಆಸ್ಪತ್ರೆ ರಸ್ತೆಯ ಪ್ರಭು ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಳ್ಳಲಿದೆ.

ಬೆಳಗ್ಗೆ 10.30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಹಾಗೂ ರಾಮಕ್ಷತ್ರಿಯ ಸಂಘ, ಮೂಡುಬಿದಿರೆಯ ಅಧ್ಯಕ್ಷ ಪ್ರೇಮಾನಂದ ಕೆ.ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷ ಜೆ. ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕೇವಲ 3 ಲಕ್ಷ ರೂ. ಮೂಲ ಬಂಡವಾಳ, 9 ನಿರ್ದೇಶಕರು ಹಾಗೂ 800 ಶೇರುದಾರರೊಂದಿಗೆ 1997ರ ಡಿಸೆಂಬರ್ 7ರಂದು ಆರಂಭಗೊಂಡ ಸಂಘವು ಇದೀಗ ಸುಮಾರು 2.8 ಕೋಟಿ ರೂ. ಬಂಡವಾಳ ಹೊಂದಿದೆ. ಪ್ರಸ್ತುತ ಸುಮಾರು 7,500 ಸದಸ್ಯರನ್ನು ಹೊಂದಿರುವ ಸಂಘವು 450 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸಿದೆ ಎಂದು ಪ್ರಕಟಣೆ ತಿಳಿಸಿದೆ.

2022ನೇ ಸಾಲಿನಲ್ಲಿ ಸಂಘವು 1 ಕೋಟಿ ರೂ.ಗೂ ಅಧಿಕ ಲಾಭ ಗಳಿಸಿದ್ದು, ಗ್ರಾಹಕರಿಗೆ ಶೇ.20ರಷ್ಟು ಲಾಭಾಂಶವನ್ನು ವಿತರಿಸಿದೆ. ಸಂಸ್ಥಾಪಕ ಜೆ. ಕೃಷ್ಣ ಪಾಲೆಮಾರ್ ಅವರ ಯೋಜನೆ, ಕಾರ್ಯತಂತ್ರ ಹಾಗೂ ವ್ಯವಸ್ಥಿತ ನಿರ್ವಹಣೆಯಿಂದ ಸಂಘವು ಗಣನೀಯ ಪ್ರಗತಿ ಸಾಧಿಸಿದೆ ಎಂದು ತಿಳಿಸಲಾಗಿದೆ.
ಸಂಘದ ಶಾಖೆಗಳು ಪ್ರಸ್ತುತ ಮಂಗಳೂರಿನ ಮೋರ್ಗನ್ಸ್ಗೇಟ್–ಜೆಪ್ಪ, ಹಂಪನಕಟ್ಟೆ, ಕಾವೂರು, ಕಾಟಿಪಳ್ಳ–ಕೈಕಂಬ, ಕೋಟೆಕಾರು ಹಾಗೂ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಬಂಟ್ವಾಳ, ಬಜಪೆ ಹಾಗೂ ಪಡೀಲ್ನಲ್ಲಿ ನೂತನ ಶಾಖೆಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದ್ದು, ಇತರ ಜಿಲ್ಲೆಗಳಿಗೂ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಸಂಘ ಹೊಂದಿದೆ.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದನ್ ಕೋಟೆಕಾರು ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ 18 ವರ್ಷಗಳ ಅನುಭವ ಹೊಂದಿದ್ದಾರೆ. ಎಚ್ಡಿಎಫ್ಸಿ ಬ್ಯಾಂಕ್ ಜತೆ ಒಪ್ಪಂದ ಮಾಡಿಕೊಂಡಿರುವ ಸಂಘವು ಸದಸ್ಯರು ಹಾಗೂ ಗ್ರಾಹಕರಿಗೆ ಸ್ವಂತ ಮೊಬೈಲ್ ಆ್ಯಪ್, ಎಟಿಎಂ, ಖಾತೆ ವಿವರಗಳ ಎಸ್ಎಂಎಸ್ ಮಾಹಿತಿ ಸೇರಿದಂತೆ ವಿವಿಧ ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ.
ಈಗಾಗಲೇ ನೆಫ್ಟ್ ಹಾಗೂ ಆರ್ಟಿಜಿಎಸ್ ಸೇವೆಗಳು ಲಭ್ಯವಿದ್ದು, ಶೀಘ್ರದಲ್ಲೇ ನೂತನ ತಲೆಮಾರಿನ ಆನ್ಲೈನ್ ಬ್ಯಾಂಕಿಂಗ್ ಸೇವೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಹಕಾರಿ ಆ್ಯಪ್ ಮೂಲಕ ಖಾತೆ ವಿವರ ವೀಕ್ಷಣೆ, ಹಣ ವರ್ಗಾವಣೆ ಹಾಗೂ ಭಾರತ್ ಬಿಲ್ ಪೇ ಸೇವೆಗಳನ್ನೂ ಗ್ರಾಹಕರಿಗೆ ಒದಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಶೇಷ ಕೊಡುಗೆ ….. !
ಮೂಡುಬಿದಿರೆಯ ನೂತನ ಶಾಖೆಯ ಉದ್ಘಾಟನಾ ಪ್ರಯುಕ್ತ ನಿರಖು ಠೇವಣಿಗಳ ಮೇಲೆ ಹಿರಿಯ ನಾಗರಿಕರಿಗೆ ಶೇ.9.5 ಹಾಗೂ ಸಾಮಾನ್ಯ ಗ್ರಾಹಕರಿಗೆ ಶೇ.9ರಷ್ಟು ಬಡ್ಡಿದರ ನೀಡಲಾಗುವುದು ಎಂದು ಸಂಘ ತಿಳಿಸಿದೆ.

