ಆರೋಗ್ಯ ಸಾಹಿತ್ಯದ ಮೂಲಕ ವೈಜ್ಞಾನಿಕ ಅರಿವು ಮೂಡಿಸಲು ಕರೆ

ಬೆಂಗಳೂರು: ಆರೋಗ್ಯದ ಕುರಿತು ವೈಜ್ಞಾನಿಕ ಅರಿವನ್ನು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸುವಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವೈದ್ಯರು ಹಾಗೂ ಸಾಹಿತಿಗಳು ಅಭಿಪ್ರಾಯಪಟ್ಟರು.

ಆರೋಗ್ಯ ಮತ್ತು ಸಾಹಿತ್ಯವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಉದ್ದೇಶದಿಂದ ಆಯೋಜಿಸಿದ್ದ ‘ವೈದ್ಯಲೋಕ ಆರೋಗ್ಯ ಕಥೆ ಮತ್ತು ಕವನ ಸ್ಪರ್ಧೆ–2026’ರ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್‌ಗೆ ಚಾಲನೆ ನೀಡಲಾಯಿತು.

ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನ ವ್ಯವಸ್ಥಾಪಕ ಎನ್. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯರು, ಆರೋಗ್ಯ ವೃತ್ತಿಪರರು, ಸಾಹಿತಿಗಳು ಹಾಗೂ ಸಾರ್ವಜನಿಕರನ್ನು ಒಂದೇ ವೇದಿಕೆಗೆ ತರುವ ವೈದ್ಯಲೋಕದ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ಆಯುರ್ವೇದ ಹಾಸ್ಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಆಶಾಕಿರಣ್ ಅವರು ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್‌ಗೆ ಚಾಲನೆ ನೀಡಿ, ವಿವಿಧ ವೈದ್ಯಕೀಯ ಪದ್ಧತಿಗಳ ಆರೋಗ್ಯ ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೈದ್ಯ ಸಾಹಿತಿ ಹಾಗೂ ವೈದ್ಯಲೋಕ ಸಂಪಾದಕಿ ಡಾ. ವಸುಂಧರಾ ಭೂಪತಿ, ಸಾಮಾಜಿಕ ಜಾಲತಾಣಗಳನ್ನು ಆರೋಗ್ಯ ಜಾಗೃತಿ ಮೂಡಿಸುವ ಸಕಾರಾತ್ಮಕ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಉತ್ತಮ ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ವೈದ್ಯ, ಕವಿ ಹಾಗೂ ಸಾಹಿತಿ ಡಾ. ಸುರೇಶ್ ನೆಗಳಗುಳಿ ಮಾತನಾಡಿ, ಆನ್‌ಲೈನ್‌ನಲ್ಲಿ ಆರೋಗ್ಯ ಮಾಹಿತಿ ಪಡೆಯುವುದು ಸಹಾಯಕವಾದರೂ, ಇಂಟರ್‌ನೆಟ್‌ನಲ್ಲಿ ಲಕ್ಷಣಗಳನ್ನು ಹುಡುಕಿ ಸ್ವಯಂ ರೋಗನಿರ್ಣಯ ಮಾಡಿಕೊಳ್ಳುವುದು ಸೂಕ್ತವಲ್ಲ. ಆರೋಗ್ಯ ಸಮಸ್ಯೆಗಳಿಗೆ ಅರ್ಹ ವೈದ್ಯರ ಸಲಹೆ ಪಡೆಯುವುದು ಅಗತ್ಯ ಎಂದರು.ಆರೋಗ್ಯ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಡಾ. ಸುರೇಶ್ ನೆಗಳಗುಳಿ, ಡಾ. ವಸುಂಧರಾ ಭೂಪತಿ ಹಾಗೂ ಎನ್.ವಿ. ರಮೇಶ್ ಅವರನ್ನು ‘ಆರೋಗ್ಯ ಸಾಹಿತ್ಯ ರತ್ನ’ ಗೌರವ ನೀಡಿ ಸನ್ಮಾನಿಸಲಾಯಿತು.

ವೈದ್ಯಲೋಕ ಮತ್ತು ಹೆಲ್ತ್ವಿಷನ್‌ನ ವ್ಯವಸ್ಥಾಪಕ ಸಂಪಾದಕ ಶ್ರೀಕೃಷ್ಣ ಮಾಯ್ಲೆಂಗಿ ಮಾತನಾಡಿ, ಆರೋಗ್ಯದ ಕುರಿತು ವೈಜ್ಞಾನಿಕ ಮಾಹಿತಿ ಹಾಗೂ ರೋಗನಿರೋಧಕ ಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣವೇ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಆರೋಗ್ಯ ಪ್ರತಿಷ್ಠಾನದ ಪ್ರಮುಖ ಉದ್ದೇಶವಾಗಿದೆ ಎಂದರು.ಸ್ಪರ್ಧೆಗೆ ವೈದ್ಯರು, ಆರೋಗ್ಯ ವೃತ್ತಿಪರರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಸುಮಾರು 500 ಮಂದಿ ಭಾಗವಹಿಸಿದ್ದರು. ಕಥೆ ಮತ್ತು ಕವನ ಸ್ಪರ್ಧೆಗಳನ್ನು ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು.

ಕಥೆ ವಿಭಾಗದಲ್ಲಿ ವೈದ್ಯರು ಹಾಗೂ ಆರೋಗ್ಯ ವೃತ್ತಿಪರರ ವಿಭಾಗದಲ್ಲಿ ಡಾ. ನವೀನ್ ಎಲ್ಲಂಗಳ, ಸಾರ್ವಜನಿಕ ವಿಭಾಗದಲ್ಲಿ ಎಸ್. ರಘುನಂದನ್, ವೈದ್ಯಕೀಯ ವಿದ್ಯಾರ್ಥಿಗಳ ವಿಭಾಗದಲ್ಲಿ ಡಾ. ಭವ್ಯ ಎಲ್. ಪ್ರಥಮ ಬಹುಮಾನ ಪಡೆದರು.ಕವನ ವಿಭಾಗದಲ್ಲಿ ವೈದ್ಯರು ಹಾಗೂ ಆರೋಗ್ಯ ವೃತ್ತಿಪರರ ವಿಭಾಗದಲ್ಲಿ ಡಾ. ಸುರೇಶ್ ನೆಗಳಗುಳಿ, ಸಾರ್ವಜನಿಕ ವಿಭಾಗದಲ್ಲಿ ಡಾ. ಕೊಳ್ಚಪ್ಪೆ ಗೋವಿಂದ ಭಟ್, ವಿದ್ಯಾರ್ಥಿಗಳ ವಿಭಾಗದಲ್ಲಿ ರವಿಕುಮಾರ್ ಎ.ಎಸ್. ಪ್ರಥಮ ಬಹುಮಾನ ಗಳಿಸಿದರು. ವಿವಿಧ ವಿಭಾಗಗಳಲ್ಲಿ ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ಸಹ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಮುಳಿಯ ಜ್ಯುವೆಲ್ಸ್ ಅಂಡ್ ಡೈಮಂಡ್ಸ್ ವತಿಯಿಂದ ಲಕ್ಕಿ ಡಿಪ್ ಡ್ರಾ ನಡೆಯಿತು. ಕಥೆ, ಕವನ ಹಾಗೂ ಸಾಹಿತ್ಯದ ಮೂಲಕ ಆರೋಗ್ಯ ಜಾಗೃತಿ ಮೂಡಿಸುವ ಈ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!