ಮಂಗಳೂರು:ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ ಸೆಂಟರ್ (ಸಿಎಫ್‌ಎಎಲ್) ವತಿಯಿಂದ 2026-27ನೇ ಶೈಕ್ಷಣಿಕ ಸಾಲಿನಲ್ಲಿ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ‘ಸರ್ಚ್ ಫಾರ್ ದಿ ನೆಕ್ಸ್ಟ್ ರಾಮಾನುಜನ್’ ಎಂಬ ಏಳು ಹಂತಗಳ ವಿಶೇಷ ಗಣಿತ ಫಝಲ್ ಲೀಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಗುರುವಾರ ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಫ್‌ಎಎಲ್‌ನ ಅಕಾಡೆಮಿಕ್ ಕೋಆರ್ಡಿನೇಟರ್ ಮಾನಸ್ ಶೆಟ್ಟಿ, ವರ್ಷಪೂರ್ತಿ ನಡೆಯಲಿರುವ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಶಾಲಾ ಪಠ್ಯಕ್ರಮವನ್ನು ಮೀರಿದ ಗಣಿತ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯ ಹಾಗೂ ತಾರ್ಕಿಕ ಚಿಂತನಾ ಶಕ್ತಿಯನ್ನು ಬೆಳೆಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಭವಿಷ್ಯದಲ್ಲಿ ಗಣಿತ ಒಲಿಂಪಿಯಾಡ್ ಹಾಗೂ ಸ್ಟೆಮ್ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ನಡೆಸಲಾಗುತ್ತದೆ. ಜೂನಿಯರ್ ವಿಭಾಗದಲ್ಲಿ 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳು ಹಾಗೂ ಸೀನಿಯರ್ ವಿಭಾಗದಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಆ.16, ಸೆ.20, ಅ.18, ನ.15, ಡಿ.20 ಹಾಗೂ 2027ರ ಜ.17ರಂದು ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಬಿಜೈಯ ಸಿಎಫ್‌ಎಎಲ್ ಕ್ಯಾಂಪಸ್‌ನಲ್ಲಿ ಸ್ಪರ್ಧೆಗಳು ನಡೆಯಲಿವೆ.

ಅತ್ಯುತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ‘ರಾಮಾನುಜನ್ ಪ್ರಶಸ್ತಿ’ ಹಾಗೂ ‘ಹರೀಶ್-ಚಂದ್ರ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಏಳು ಹಂತಗಳಲ್ಲಿ ಕನಿಷ್ಠ ಐದು ಹಂತಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಪುಸ್ತಕಗಳು, ನಗದು ಬಹುಮಾನ ನೀಡುವುದರ ಜೊತೆಗೆ ನೋಂದಣಿ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುವುದು ಎಂದು ಮಾನಸ್ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಆಡಳಿತಾಧಿಕಾರಿ ಕಾವ್ಯ ಹಾಗೂ ಪಿಯು ವಿಭಾಗದ ಆಡಳಿತಾಧಿಕಾರಿ ಕ್ರಿಶ್ ಕ್ರಾಸ್ತಾ ಉಪಸ್ಥಿತರಿದ್ದರು.

