ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಡಿಕೆಶಿಗೆ ಮನವಿ; 5 ವರ್ಷಕ್ಕೊಮ್ಮೆ ಗನ್ ಲೈಸೆನ್ಸ್ ನವೀಕರಣಕ್ಕೆ ಭರವಸೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಉಡುಪಿ–ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಸುದೀರ್ಘ ಮನವಿ ಪತ್ರ ಸಲ್ಲಿಸಿದ್ದಾರೆ.

ಸಭೆಯಲ್ಲಿ ಪ್ರಮುಖವಾಗಿ ರೈತರ ಗನ್ ಲೈಸೆನ್ಸ್ ನವೀಕರಣ, ಕೊಯಿಲ ಪಶುವೈದ್ಯಕೀಯ ಕಾಲೇಜು, ಮಳೆಹಾನಿಗೊಳಗಾದ ರಸ್ತೆಗಳ ಶಾಶ್ವತ ಅಭಿವೃದ್ಧಿ, ಆಯುಷ್ ವೈದ್ಯಾಧಿಕಾರಿಗಳ ನೇಮಕ ಹಾಗೂ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 13 ಸಾವಿರಕ್ಕೂ ಅಧಿಕ ರೈತರು ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕಾನೂನುಬದ್ಧ ಗನ್ ಲೈಸೆನ್ಸ್ ಹೊಂದಿದ್ದಾರೆ. ಲೈಸೆನ್ಸ್ ನವೀಕರಣದ ಸಂದರ್ಭದಲ್ಲಿ ರೈತರಿಗೆ ಅನಗತ್ಯ ತೊಂದರೆ ನೀಡಲಾಗುತ್ತಿದೆ ಎಂಬ ವಿಷಯವನ್ನು ಶಾಸಕರು ಸರ್ಕಾರದ ಗಮನಕ್ಕೆ ತಂದಿದ್ದಾರೆ.

ಈ ಹಿಂದೆ ಇದ್ದ ವ್ಯವಸ್ಥೆಯಂತೆ ಯಾವುದೇ ಎನ್‌ಒಸಿ ತೊಡಕಿಲ್ಲದೆ 5 ವರ್ಷಗಳ ಅವಧಿಗೆ ಗನ್ ಲೈಸೆನ್ಸ್ ನವೀಕರಿಸುವ ವ್ಯವಸ್ಥೆ ಮುಂದುವರಿಸುವುದಾಗಿ ಡಿ.ಕೆ. ಶಿವಕುಮಾರ್ ಅವರು ಸಕಾರಾತ್ಮಕ ಭರವಸೆ ನೀಡಿದ್ದಾರೆ ಎಂದು ಕಿಶೋರ್ ಕುಮಾರ್ ತಿಳಿಸಿದ್ದಾರೆ. ಬಾಕಿ ಇರುವ ಅರ್ಜಿಗಳ ತ್ವರಿತ ವಿಲೇವಾರಿಗೆ ತಾಲೂಕುವಾರು ‘ಕೋವಿ ಅದಾಲತ್’ ನಡೆಸುವಂತೆಯೂ ಅವರು ಮನವಿ ಮಾಡಿದ್ದಾರೆ.

ಇದರ ಜೊತೆಗೆ ಕೊಯಿಲದಲ್ಲಿರುವ ಜಾನುವಾರು ಸಂವರ್ಧನಾ ಕೇಂದ್ರದ ಜಾಗದಲ್ಲಿ ಮಂಜೂರಾಗಿರುವ ಪಶುವೈದ್ಯಕೀಯ ಕಾಲೇಜಿನ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಲಾಗಿದೆ.

ಮಳೆಗಾಲದಿಂದ ಹದಗೆಟ್ಟಿರುವ ಗ್ರಾಮೀಣ, ಎಂಡಿಆರ್ ಹಾಗೂ ಪಿಡಬ್ಲ್ಯೂಡಿ ರಸ್ತೆಗಳಿಗೂ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಲಾಗಿದೆ. ವೈಜ್ಞಾನಿಕ ಚರಂಡಿ ವ್ಯವಸ್ಥೆಯೊಂದಿಗೆ ಕಾಂಕ್ರೀಟ್ ಅಥವಾ ಜಿಯೋ-ಟೆಕ್ಸ್‌ಟೈಲ್ ತಂತ್ರಜ್ಞಾನ ಬಳಸಿ ಸರ್ವಋತು ರಸ್ತೆಗಳ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವಂತೆ ಆಗ್ರಹಿಸಲಾಗಿದೆ.

ವಿಟ್ಲ ಹಾಗೂ ಉಪ್ಪಿನಂಗಡಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಆಯುಷ್ ವೈದ್ಯಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು, ಬನ್ನೂರು ಗ್ರಾಮದ ಕುಂಟಾಣದಲ್ಲಿ ಮಂಜೂರಾಗಿರುವ ಜಮೀನಿನಲ್ಲಿ 100 ಹಾಸಿಗೆಗಳ ಆಯುರ್ವೇದ ಬೋಧನಾ ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ಹಾಗೂ ಅನುದಾನ ನೀಡುವಂತೆಯೂ ಮನವಿ ಸಲ್ಲಿಸಲಾಗಿದೆ.

ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಇರುವ ವೆಂಟಿಲೇಟರ್‌ಗಳು ಹಾಗೂ ಆಕ್ಸಿಜನ್ ಘಟಕಗಳನ್ನು ದುರಸ್ತಿಗೊಳಿಸಿ ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಸುಸಜ್ಜಿತಗೊಳಿಸಬೇಕು. ಕೋವಿಡ್ ಅವಧಿಯಲ್ಲಿ ಸೇವೆ ಸಲ್ಲಿಸಿದ ಹೊರಗುತ್ತಿಗೆ ನರ್ಸ್‌ಗಳು ಮತ್ತು ಲ್ಯಾಬ್ ಟೆಕ್ನಿಷಿಯನ್‌ಗಳ ಬಾಕಿ ಗೌರವಧನ ಹಾಗೂ ಸೇವಾ ಭದ್ರತೆಯನ್ನೂ ಒದಗಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.

ಕರಾವಳಿ ಭಾಗದ ಜನರ ಹಿತದೃಷ್ಟಿಯಿಂದ ಈ ಎಲ್ಲಾ ಯೋಜನೆಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ, ಅಗತ್ಯ ಅನುದಾನ ಮತ್ತು ಆಡಳಿತಾತ್ಮಕ ಅನುಮೋದನೆಗಳನ್ನು ಶೀಘ್ರವಾಗಿ ನೀಡಬೇಕು ಎಂದು ಸರ್ಕಾರಕ್ಕೆ ಕಿಶೋರ್ ಕುಮಾರ್ ಪುತ್ತೂರು ಮನವಿ ಮಾಡಿದ್ದಾರೆ.

SHARE
Loading spinner

One thought on “ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಡಿಕೆಶಿಗೆ ಮನವಿ; 5 ವರ್ಷಕ್ಕೊಮ್ಮೆ ಗನ್ ಲೈಸೆನ್ಸ್ ನವೀಕರಣಕ್ಕೆ ಭರವಸೆ

Leave a Reply

Your email address will not be published. Required fields are marked *

error: Content is protected !!