ಸೆ.18ರ ಮಂಗಳೂರು ಸಚಿವ ಸಂಪುಟ ಸಭೆಯಲ್ಲೇ ತುಳು ಭಾಷೆಗೆ ಮಾನ್ಯತೆ ಘೋಷಿಸಲಿ-ತುಳುನಾಡ ರಕ್ಷಣಾ ವೇದಿಕೆ ಆಗ್ರಹ

ಉಡುಪಿ: ತುಳು ಭಾಷೆಯ ವಿಚಾರದಲ್ಲಿ ಇನ್ನೆಷ್ಟು ವರ್ಷ ಭರವಸೆ ಕೇಳಬೇಕು? ಇನ್ನು ಭರವಸೆ ಬೇಡ, ಸ್ಪಷ್ಟ ನಿರ್ಧಾರ ಬೇಕು. ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ತುಳು ಭಾಷೆಗೆ ಕರ್ನಾಟಕದ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡುವ ಕುರಿತು ಐತಿಹಾಸಿಕ ನಿರ್ಧಾರ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಫ್ರಾಂಕಿ ಡಿಸೋಜ ಒತ್ತಾಯ ಮಾಡಿದ್ದಾರೆ.


ಮಾಧ್ಯಮದ ಜೊತೆ ಮಾತನಾಡಿದ ಅವರು ,ತುಳುವರಿಗೆ ನಿರೀಕ್ಷೆಯ ದಿನ ಸೆ.18. ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ತುಳುನಾಡಿನ ಜನರಿಗೆ ಸಾಮಾನ್ಯ ಅಡಳಿತಾತ್ಮಕ ಸಭೆಯಲ್ಲ. ಹಲವು ವರ್ಷಗಳಿಂದ ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸ್ಪಷ್ಟ ದಿಕ್ಕು ನೀಡಬಹುದಾದ ಮಹತ್ವದ ವೇದಿಕೆಯಾಗಿದೆ ಎಂದು ಹೇಳಿದರು.

ತುಳು ಭಾಷೆಯ ವಿಚಾರವನ್ನು ನಿರ್ಲಕ್ಷಿಸಿದರೆ, ತುಳುನಾಡಿನ ಜನರ ಭಾವನೆಗಳಿಗೆ ನ್ಯಾಯ ದೊರಕಿದಂತಾಗುವುದಿಲ್ಲ. ಈ ಬಾರಿ ಮನವಿ ಸ್ವೀಕರಿಸುವುದು ಅಥವಾ ಭರವಸೆ ನೀಡುವುದು ಸಾಕಾಗುವುದಿಲ್ಲ. ತುಳು ಕೇವಲ ಭಾಷೆಯಲ್ಲ, ತುಳುನಾಡಿನ ಅಸ್ಮಿತೆ ತುಳು. ತುಳು ಎಂದರೆ ಕೇವಲ ಸಂವಹನದ ಭಾಷೆಯಲ್ಲ. ಅದು ತುಳುನಾಡಿನ ಇತಿಹಾಸ, ಸಂಸ್ಕೃತಿ, ಜನಪದ, ಸಾಹಿತ್ಯ, ಕಲೆ, ಆಚರಣೆ, ಭೂತಾರಾಧನೆ, ನಾಗಾರಾಧನೆ, ಯಕ್ಷಗಾನ, ಕಂಬಳ ಸೇರಿದಂತೆ ಹಲವು ಸಾಂಸ್ಕೃತಿಕ ಪರಂಪರೆಗಳ ಜೀವನಾಡಿಯಾಗಿದೆ. ಶತಮಾನಗಳ ಇತಿಹಾಸ ಹೊಂದಿರುವ ತುಳು ಭಾಷೆಯನ್ನು ಮಾತನಾಡುವ ಜನರು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳು ಹಾಗೂ ವಿದೇಶಗಳಲ್ಲಿಯೂ ನೆಲೆಸಿದ್ದಾರೆ. ಇಂತಹ ಶ್ರೀಮಂತ ಭಾಷೆಗೆ ಆಡಳಿತಾತ್ಮಕವಾಗಿ ಸೂಕ್ತ ಸ್ಥಾನಮಾನ ದೊರೆಯದಿರುವುದು ತುಳುವರ ಪಾಲಿಗೆ ವಿಷಾದದ ಸಂಗತಿ.ಈ ಸಂಬಂಧ ಹಲವು ವರ್ಷ ಹೋರಾಟ ನಡೆಸಿದ್ದೇವೆ.ಇನ್ನೂ ಕೂಡ ಮನವಿ ಮಾಡುತ್ತಾ ಕೂರುವುದಿಲ್ಲ.ಈ ಬಾರಿ ಸರಕಾರ ಖಂಡಿತ ತಮ್ಮ ಬಹುಕಾಲದ ಬೇಡಿಕೆ ಈಡೇರಿಸುವ ಭರವಸೆ ಹೊಂದಿದ್ದೇವೆ.ಒಂದು ವೇಳೆ ಸರಕಾರ ಮತ್ತೆ ನೆಪ ಹೇಳುತ್ತಾ ಕೂತರೆ ಮುಂದಿನ ದಿನಗಳಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ಹೋರಾಟ ನಡೆಸುತ್ತೇವೆ ಎಂದವರು ಎಚ್ಚರಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!