ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಲೈಟ್ ಸೆಟ್ ಅವಘಡ

ಉಡುಪಿ: ನವರಾತ್ರಿ ಉತ್ಸವದ ಸಂಭ್ರಮದಲ್ಲಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಬೃಹತ್ ಅಲಂಕಾರಿಕ ಲೈಟ್ ಸೆಟ್ ಕುಸಿದು ಬಿದ್ದು, ವಯೋವೃದ್ಧ ಭಕ್ತರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಘಟನೆಯಲ್ಲಿ ಮೂವರು ಭಕ್ತರು ತೊಂದರೆಗೆ ಒಳಗಾಗಿದ್ದು, ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರಲ್ಲಿ ಆತಂಕ ಮೂಡಿದೆ.


ದೇವಸ್ಥಾನದ ಎದುರಿನ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ನವರಾತ್ರಿ ಉತ್ಸವದ ಅಲಂಕಾರಕ್ಕಾಗಿ ಬೃಹತ್ ಲೈಟ್ ಸೆಟ್‌ಗಳನ್ನು ಅಳವಡಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಹಲವು ಭಕ್ತರು ಕಟ್ಟಡದ ನೆರಳಿನಲ್ಲಿ ನಿಂತಿದ್ದರು. ಈ ವೇಳೆ ಬೀಸಿದ ಬಲವಾದ ಗಾಳಿಗೆ ಲೈಟ್ ಸೆಟ್ ಏಕಾಏಕಿ ಕುಸಿದು, ಕೆಳಗೆ ನಿಂತಿದ್ದ ಭಕ್ತರ ಮೇಲೆ ಬಿದ್ದಿದೆ.


ಘಟನೆಯಲ್ಲಿ ವಯೋವೃದ್ಧ ಭಕ್ತರೊಬ್ಬರ ತಲೆಗೆ ಗಂಭೀರ ಗಾಯವಾಗಿದ್ದು, ಮೂವರು ಭಕ್ತರು ಲೈಟ್ ಸೆಟ್‌ನಿಂದ ತೊಂದರೆಗೆ ಒಳಗಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಲೈಟ್ ಸೆಟ್ ತೆರವುಗೊಳಿಸಿ, ಗಾಯಗೊಂಡ ವೃದ್ಧರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.


ನವರಾತ್ರಿ ಹಿನ್ನೆಲೆಯಲ್ಲಿ ಕೊಲ್ಲೂರು ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ಆತಂಕಕ್ಕೆ ಕಾರಣವಾಗಿದೆ. ದೇವಸ್ಥಾನದ ಸುತ್ತಮುತ್ತ ಅಳವಡಿಸುವ ಅಲಂಕಾರಿಕ ದೀಪಗಳು, ಬ್ಯಾನರ್‌ಗಳು ಹಾಗೂ ತಾತ್ಕಾಲಿಕ ವ್ಯವಸ್ಥೆಗಳ ಸುರಕ್ಷತೆಯನ್ನು ಸಂಬಂಧಪಟ್ಟವರು ಖಚಿತಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

SHARE
Loading spinner

One thought on “ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಲೈಟ್ ಸೆಟ್ ಅವಘಡ”

  1. I was looking for something stable and secure and this place delivered. Everything works exactly as it should and the connection is solid. Big thumbs up for vnpj888.

    Loading spinner

Leave a Reply

Your email address will not be published. Required fields are marked *

error: Content is protected !!