
ಕಾಸರಗೋಡು : ಖಾಸಗಿ ಸಂಸ್ಥೆಗೆ ರೂ. 38 ಕೋಟಿ ಮೌಲ್ಯದ ಐಫೋನ್ಗಳನ್ನು ನೀಡಿ ವಂಚಿಸಿರುವ ಘಟನೆಗೆ ಸಂಬಂಧಿಸಿದಂತೆ ಕಾಸರಗೋಡು ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಈ ಪ್ರಕರಣದ ತನಿಖಾ ಉಸ್ತುವಾರಿಯನ್ನು ಇನ್ಸ್ಪೆಕ್ಟರ್ ಮೆಲ್ಬನ್ ಜೋಸಿ ಅವರಿಗೆ ವಹಿಸಲಾಗಿದೆ.

ದುಬೈನ ಡೇರಾದಲ್ಲಿ ‘ಮಿಲೇನಿಯಂ ಗಿಫ್ಟ್ ಟ್ರೇಡಿಂಗ್’ ಎಂಬ ಸಂಸ್ಥೆಯನ್ನು ನಡೆಸುತ್ತಿರುವ ಬೆಳ್ಳೂರು ಮೂಲದ (ಪ್ರಸ್ತುತ ಚೆರ್ಕಳ ಬ್ಯಾಂಕ್ ರಸ್ತೆಯಲ್ಲಿ ವಾಸಿಸುತ್ತಿರುವ) ಎನ್. ಎ. ಅಬ್ದುಲ್ ರವೂಫ್ ಮತ್ತು ಅವರ ಸಂಬಂಧಿಕರಾದ ಭಾಗಿದಾರರು ಈ ಕುರಿತು ದೂರು ನೀಡಿದ್ದಾರೆ.

ಕೋಝಿಕ್ಕೋಡ್ನ ರಮೀಸ್, ಮಲಪ್ಪುರಂನ ಯೂಸುಫ್, ಕೊಟ್ಟಾಯಂನ ಸಜಿಲ್, ಫರೀದ್ ಹಾಗೂ ತಿಲುವನಂತಪುರದ ನಿಸಾಂ ಎಂಬುವವರ ವಿರುದ್ಧ ದೂರು ದಾಖಲಾಗಿದೆ. 22 ಅಕ್ಟೋಬರ್ 2022 ರಿಂದ 28 ಅಕ್ಟೋಬರ್ 2023 ರ ಅವಧಿಯಲ್ಲಿ ನಕಲಿ ‘ಪೇಡ್ ಸಿಲ್’ ಬಳಸಿ ಐಫೋನ್ಗಳನ್ನು ಪಡೆದು, ಅವುಗಳನ್ನು ದುಬೈನಲ್ಲಿಯೇ ಮಾರಾಟ ಮಾಡಿ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

