ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ರಜತ ಮಹೋತ್ಸವದ ಸಂಭ್ರಮ; ಅ. 24ರಂದು ನೂತನ ಕಚೇರಿ ಉದ್ಘಾಟನೆ

ಉಡುಪಿ: ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ರಜತ ಮಹೋತ್ಸವದ ಸಂಭ್ರಮ ಹಾಗೂ ನೂತನ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಅ. 24ರಂದು ಸಂಜೆ 4.30ಕ್ಕೆ ಉಡುಪಿಯ ಜೋಡುಕಟ್ಟೆಯ ಆಶ್ರಯ ಟವರ್ಸ್‌ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.


ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಹಿರಿಯ ಸಹಕಾರಿ ಶಂಭು ಶೆಟ್ಟಿ ದೀಪಜ್ವಲನೆಗೈಲಿದ್ದಾರೆ ಎಂದರು.
2000ನೇ ಇಸವಿಯಲ್ಲಿ ಶಿವಪಾಡಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಹೆಸರಿನಲ್ಲಿ ಆರಂಭಗೊಂಡ ಸಂಘವು ಪ್ರಸ್ತುತ ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಹೆಸರಿನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, 25 ವರ್ಷಗಳ ಪಯಣವನ್ನು ಪೂರ್ಣಗೊಳಿಸಿದೆ. ಇದೀಗ ಸ್ವಂತ ಹವಾನಿಯಂತ್ರಿತ ಕಟ್ಟಡದಲ್ಲಿ ಪ್ರಧಾನ ಕಚೇರಿ ಆರಂಭಿಸುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಹೇಳಿದರು.
ಆರಂಭದ ಎರಡು ವರ್ಷಗಳಲ್ಲಿ ಸಂಘವು ತೀವ್ರ ಆರ್ಥಿಕ ಸಂಕಷ್ಟ ಎದುರಿಸಿತ್ತು. ಈ ಸಂದರ್ಭದಲ್ಲಿ ಪೇಜಾವರ ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಹಿರಿಯ ಸಹಕಾರಿ ಶಂಭು ಶೆಟ್ಟಿಯವರ ನಿರ್ದೇಶನದಂತೆ ಹೊಸ ಆಡಳಿತ ಮಂಡಳಿ ರಚಿಸಲಾಯಿತು. ಅದರಂತೆ ಸಂಘದ ಅಧ್ಯಕ್ಷತೆಯ ಜವಾಬ್ದಾರಿಯನ್ನು ವಹಿಸಿಕೊಂಡು ಮುನ್ನಡೆಸಿದ ಬಳಿಕ, ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಎಂಬ ಹೆಸರಿನಲ್ಲಿ ಸಂಘವು ಪ್ರಗತಿಯ ಹಾದಿಯಲ್ಲಿ ಸಾಗಿತು ಎಂದು ವಿವರಿಸಿದರು.


ಸಂಘವು ನಿರಂತರವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರಿಗೆ ಪ್ರತಿ ವರ್ಷ ಶೇ 12ರಷ್ಟು ಲಾಭಾಂಶ ನೀಡುತ್ತಾ ಬಂದಿದೆ. ಸದಸ್ಯರ ಆರ್ಥಿಕ ಹಿತಾಸಕ್ತಿ ಮತ್ತು ವಿಶ್ವಾಸಕ್ಕೆ ಆದ್ಯತೆ ನೀಡಿರುವ ಸಂಘವು ಪ್ರಸ್ತುತ ಸುಮಾರು 2,000 ಸದಸ್ಯರನ್ನು ಹೊಂದಿದೆ. ಸುಮಾರು ₹50 ಕೋಟಿ ಠೇವಣಿ ಸಂಗ್ರಹಿಸಿದ್ದು, ವಾರ್ಷಿಕ ₹125 ಕೋಟಿ ವಹಿವಾಟು ನಡೆಸುತ್ತಿದೆ ಎಂದು ತಿಳಿಸಿದರು.
ಸಂಘದ ಪ್ರಧಾನ ಕಚೇರಿಯು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕು ಎಂಬುದು ಆರಂಭದಿಂದಲೂ ಹೊಂದಿದ್ದ ಕನಸಾಗಿತ್ತು. ಹಲವು ವರ್ಷಗಳ ಪರಿಶ್ರಮ, ಸದಸ್ಯರ ಸಹಕಾರ ಹಾಗೂ ಆಡಳಿತ ಮಂಡಳಿಯ ದೂರದೃಷ್ಟಿಯಿಂದ ಈ ಕನಸು ನನಸಾಗಿದೆ. ನೂತನ ಕಚೇರಿಯು ಸಂಘದ ಮುಂದಿನ ಬೆಳವಣಿಗೆಗೆ ಪ್ರೇರಣೆ ನೀಡುವುದರೊಂದಿಗೆ ಸದಸ್ಯರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಸುರೇಶ್ ಪ್ರಭು, ಗಣೇಶ್ ಕುಮಾರ್, ಅವಿನಾಶ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಂಜಿತಾ ಪ್ರವೀಣ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!