47ನೇ ಅನುಭವ ಮಂಟಪ ಉತ್ಸವಕ್ಕೆ ಸರ್ವರಿಗೂ ಆದರದ ಸ್ವಾಗತ: ಪೂಜ್ಯ ಶ್ರೀ ಶಿವಾನಂದ ಸ್ವಾಮೀಜಿಗಳವರು

ಚಿಟಗುಪ್ಪಾ: ಬಸವಣ್ಣನವರ ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶದಿಂದ ಇದೆ ತಿಂಗಳು 28,29 ರಂದು ಅನುಭವ ಮಂಟಪ ಬಸವಕಲ್ಯಾಣದಲ್ಲಿ ಆಯೋಜಿಸಲಾಗುತ್ತಿರುವ 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಅನುಭವ ಮಂಟಪದ ಸಂಚಾಲಕರಾದ ಪೂಜ್ಯ ಶ್ರೀ ಶಿವಾನಂದ ಸ್ವಾಮೀಜಿಗಳವರು ಕೋರಿದ್ದಾರೆ.

ಈ ಹಿನ್ನೆಲೆಯಲ್ಲಿ ಉತ್ಸವದ ಯಶಸ್ವಿ ಆಯೋಜನೆ ಹಾಗೂ ಸರ್ವರ ಸಹಭಾಗಿತ್ವದ ಕುರಿತು ಚಿಟಗುಪ್ಪಾ ಪಟ್ಟಣದಲ್ಲಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಪೂಜ್ಯ ಶ್ರೀ ಶಿವಾನಂದ ಸ್ವಾಮೀಜಿಗಳವರು, ಶರಣರ ವಚನ ಸಾಹಿತ್ಯ ಮತ್ತು ಬಸವತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ. ಜಾತಿ, ಧರ್ಮ, ವರ್ಗಗಳ ಭೇದಭಾವವಿಲ್ಲದೆ ಸರ್ವರೂ ಒಂದಾಗಿ ಬದುಕುವ ಮಾನವೀಯ ಸಮಾಜ ನಿರ್ಮಾಣಕ್ಕೆ ಶರಣರ ಸಂದೇಶಗಳು ದಾರಿದೀಪವಾಗಿವೆ. ಆದ್ದರಿಂದ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ಪ್ರತಿಯೊಬ್ಬರೂ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಹಾಗೂ ಬಸವತತ್ವ ಅನುಯಾಯಿ ಸಂಗಮೇಶ ಎನ್. ಜವಾದಿ ಅವರು, 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವವು ಕೇವಲ ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರ್ಯಕ್ರಮವಾಗಿರದೆ, ಬಸವಣ್ಣನವರ ವೈಚಾರಿಕ ಚಿಂತನೆ, ಶರಣರ ಜೀವನ ಮೌಲ್ಯಗಳು, ಸಮಾನತೆ ಮತ್ತು ಮಾನವೀಯತೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ವದ ವೇದಿಕೆಯಾಗಿದೆ. ಯುವಜನತೆ ಶರಣರ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ, ಅವುಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಗಣ್ಯರಾದ ರೇವಪ್ಪ ಪಾಟೀಲ ಇಟಗಾ, ಶರಣೆ ಇಂದುಮತಿ ಗಾರಂಪಳ್ಳಿ, ಮನೋಹರ್ ಮೇಧಾ, ಚಂದ್ರಶೇಖರ ತಂಗಾ, ರವಿಚಂದ್ರ ಶಿವಪೂಜಿ, ಗುರುನಾಥ್ ನಾರಾಯಪೇಟ್, ಅಸ್ಲಾಂಮಿಯಾ ಆಜಾಮ್ ಸ್ವೀಟ್ ಹೌಸ್, ವೀರಶೆಟ್ಟಿ ಹುಡೇದ, ಸುರೇಶ ಪಡಗಿ, ಶಿವಕುಮಾರ ಮುಕರಂಬಿ, ಸತೀಶ ಮಹೇಂದ್ರಕರ್, ನರಸಪ್ಪ ಯರಗುಂಟಿ, ಚನ್ನವೀರ ಲಾತೂರೆ, ಶೌರ್ಯ ಜವಾದಿ, ಶ್ರಾವ್ಯ ಜವಾದಿ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶರಣರ ವಿಚಾರಧಾರೆಗಳನ್ನು ಮನೆಮನೆಗೆ ತಲುಪಿಸುವ ಸಂಕಲ್ಪದೊಂದಿಗೆ 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವವನ್ನು ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕೆಂದು ಈ ಸಂದರ್ಭದಲ್ಲಿ ಎಲ್ಲರಲ್ಲಿಯೂ ಮನವಿ ಮಾಡಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!