ಮಂಗಳೂರು: ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವತಿಯಿಂದ ಕೊಡ ಮಾಡುವ ಪ್ರತಿಷ್ಠಿತ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಯಕ್ಷಗಾನ ರಂಗದ ಅಗ್ರಮಾನ್ಯ ಮಹಿಳಾ ಭಾಗವತೆಯಾದ ಕಾವ್ಯಶ್ರೀ ಅಜೇರನ್ನು ಮತ್ತು ರಂಗಭೂಮಿ ಕ್ಷೇತ್ರಕ್ಕೆ ನೀಡಲಾಗುವ ಕುಂದೇಶ್ವರ ಕಲಾಭೂಷಣ ಪ್ರಶಸ್ತಿಗೆ ಹಿರಿಯ ಕಲಾವಿದ ಉಮೇಶ್ ಮಿಜಾರ್ ರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಸಂಚಾಲಕ ಜಿತೇಂದ್ರ ಕುಂದೇಶ್ವರ ತಿಳಿಸಿದರು .
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು , ಶ್ರೀ ಕುಂದೇಶ್ವರ ದೇಗುಲದ ಧರ್ಮದರ್ಶಿ, ಯಕ್ಷಗಾನ ಮೇಳ ಸಂಘಟಕ, ಕಲಾವಿದ ಹಾಗೂ ಅರ್ಥಧಾರಿಯಾಗಿದ್ದ ದಿವಂಗತ ಡಿ ರಾಘವೇಂದ್ರ ಭಟ್ ಅವರ ಸ್ಮರಣಾರ್ಥವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಜನವರಿ 21ರಿಂದ 23ರವರೆಗೆ ಶ್ರೀ ಕುಂದೇಶ್ವರ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ ನಡೆಯಲಿದ್ದು, ಜನವರಿ 23ರಂದು ಸಂಜೆ 7 ಗಂಟೆಯಿಂದ ಮಹಿಳಾ ಯಕ್ಷಗಾನ ಹಾಗೂ ತುಳು ನಾಟಕ ಕಾರ್ಯಕ್ರಮಗಳೊಂದಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
ಈ ಹಿಂದೆ ಹಲವು ಖ್ಯಾತ ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸಮಾರಂಭದ ಬಳಿಕ ನಮ್ಮ ಬೆದ್ರ ಕಲಾವಿದರಿಂದ ‘ವೈರಲ್ ವೈಶಾಲಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು .