ಕುಂಪಲ–ಬೈಪಾಸ್ ಡಿಮಾರ್ಟ್‌ನಲ್ಲಿ ಉದ್ಯೋಗವಿದೆ ಎಂದು ಸುಳ್ಳು ಜಾಹಿರಾತು: ನೂರಾರು ಮುಗ್ಧರು ಶಾಪಿಂಗ್ ಮಾಲ್ ಎದುರು ಜಮಾವಣೆ

ಮಂಗಳೂರು :ದೇಶದ ಪ್ರಸಿದ್ಧ ಶಾಪಿಂಗ್ ಮಾಲ್ ಡಿಮಾರ್ಟ್ ಸಂಸ್ಥೆಯ ಶಾಖೆಯೊಂದು ಉಳ್ಳಾಲ ತಾಲೂಕಿನ ಕುಂಪಲ- ಬೈಪಾಸ್ ಎಂಬಲ್ಲಿ ನಿರ್ಮಾಣಗೊಳ್ಳುತ್ತಿದೆ. ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಇರೋದಾಗಿ ಯಾರೋ ವಿಘ್ನ ಸಂತೋಷಿಗಳು ಜಾಲತಾಣಗಳಲ್ಲಿ ಜಾಹಿರಾತು ಹರಿಯಬಿಟ್ಟಿದ್ದು, ಉದ್ಯೋಗ ಅರಸಿ ಮಾಲ್ ಕಡೆಗೆ ಧಾವಿಸಿ ಬಂದ ನೂರಾರು ಮುಗ್ಧ ಜನರಿಗೆ ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿಯ ಮಾತು ಕೇಳಿ ಶಾಕ್ ಆಗಿದೆ.ಸಾಮಾಜಿಕ ಜಾಲತಾಣವನ್ನ ಎಷ್ಟರ ಮಟ್ಟಿಗೆ ದುರುಪಯೋಗ ಪಡಿಸಬಹುದೆಂಬುದಕ್ಕೆ ಕುಂಪಲ -ಬೈಪಾಸಿನ ನೂತನ ಡಿಮಾರ್ಟ್ ನಲ್ಲಿ ಉದ್ಯೋಗಾವಕಾಶದ ಜಾಹಿರಾತು ಹರಿಯಬಿಟ್ಟ ಬೆಳವಣಿಗೆಯೇ ನಿದರ್ಶನ.

ಜಾಲತಾಣಗಳಲ್ಲಿ ಇಂತಹ ಕಂಟೆಂಟ್ ಗಳನ್ನ ಸೃಷ್ಟಿಸುವವರಿಗೆ ಮನಸ್ಸಿಗೆ ಒಂದಷ್ಟು ಸಂತೋಷ ಲಭಿಸಬಹುದು. ಆದರೆ ಇಂತಹ ಸುಳ್ಳು ಜಾಹಿರಾತುಗಳನ್ನೇ ನಂಬಿ ಕೆಲಸ ಅರಸಿ ಬಂದವರ ಗೋಳನ್ನು ಕೇಳುವಾಗ ಎಂಥವರಿಗೂ ಬೇಸರವಾಗದೆ ಇರಲಾರದು.ಕುಂಪಲ- ಬೈಪಾಸ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಡಿಮಾರ್ಟ್ ಶಾಪಿಂಗ್ ಮಾಲ್ ಗೆ ಸಿಬ್ಬಂದಿಗಳು ಬೇಕಾಗಿದ್ದು, ಅನಕ್ಷರಸ್ಥರಿಂದ ಹಿಡಿದು ಪದವೀಧರರಿಗೂ ಉದ್ಯೋಗಾವಕಾಶಗಳು ಲಭ್ಯವಿದೆಯೆಂಬ ಜಾಹಿರಾತನ್ನು ಹರಿಯಬಿಡಲಾಗಿತ್ತು. ಇದು ಕಳೆದ ನಾಲೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಶೇಷವೆಂದರೆ ಜಾಹಿರಾತಿನಲ್ಲಿ ಡಿಮಾರ್ಟ್ ಸಂಸ್ಥೆಗೆ ಸಂಬಂಧಿಸಿದ ಯಾವುದೇ ಫೋನ್ ನಂಬ‌ರ್, ಈಮೇಲ್ ವಿಳಾಸಗಳನ್ನು ಹಾಕಿಲ್ಲ.

ಮುಗ್ಧ ಜನರು ನಿನ್ನೆಯಿಂದ ಬೈಪಾಸಿನ ಡಿಮಾರ್ಟ್ ಎದುರಲ್ಲಿ ಜಮಾಯಿಸಿದ್ದು ಕೆಲಸಕ್ಕಾಗಿ ಮುಗಿ ಬಿದ್ದಿದ್ದಾರೆ. ಅಸಲಿಗೆ ಡಿಮಾರ್ಟ್ ಸಂಸ್ಥೆಯು ಉದ್ಯೋಗಾವಕಾಶದ ಬಗ್ಗೆ ಯಾವುದೇ ಜಾಹಿರಾತು ನೀಡಿಲ್ಲವೆಂದು ಉದ್ಯೋಗ ಅರಸಿ ಬಂದ ಜನರಲ್ಲಿ ಡಿಮಾರ್ಟ್‌ ಸೆಕ್ಯುರಿಟಿ ಸಿಬ್ಬಂದಿ ಸಮಜಾಯಿಷಿ ನೀಡಿದ್ದಾರೆ.ಇದೇ ಫೆಬ್ರವರಿ ತಿಂಗಳ ಕೊನೆಯೊಳಗೆ ಡಿಮಾರ್ಟ್ ಶಾಪಿಂಗ್ ಮಾಲ್ ವಹಿವಾಟು ಆರಂಭಿಸಲಿದ್ದು, ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅದಾಗಲೇ ನಿನ್ನೆಯಿಂದ ಸುಮಾರು ಐನೂರಕ್ಕೂ ಅಧಿಕ ಮಂದಿ ಇಲ್ಲಿಗೆ ಉದ್ಯೋಗ ಅರಸಿ ಬರುತ್ತಲೇ ಇದ್ದಾರೆಂದು ಡಿಮಾರ್ಟ್ ಶಾಪಿಂಗ್ ಮಾಲ್ ನ ಸೆಕ್ಯುರಿಟಿ ಸಿಬ್ಬಂದಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!