ಭೂಮಿ ಮಂಜೂರಾತಿ ಆಗ್ರಹಿಸಿ ಬಂಟ್ವಾಳದಲ್ಲಿ ಕೊರಗ ಸಮುದಾಯದ ಆಹೋರಾತ್ರಿ ಧರಣಿ

ಬಂಟ್ವಾಳ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ ಕೇರಳ,ಕೊರಗ ಅಭಿವೃದ್ಧಿ ಸಂಘ ಬಂಟ್ವಾಳ ತಾಲೂಕು ಇವರ ಜಂಟಿ ಆಶ್ರಯದಲ್ಲಿ ಕೃಷಿ ಭೂಮಿ ಮಂಜೂರಾತಿ, ಹಾಗೂ ಕೊರಗ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಮಂಜೂರಾತಿ ನೀಡುವಂತೆ ಒತ್ತಾಯಿಸಿ ಆಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹ ಬಿಸಿರೋಡಿನ ಮಿನಿವಿಧಾನ ಸೌಧದ ( ಆಡಳಿತ ಸೌಧ) ಮುಂಭಾಗದಲ್ಲಿ ನಡೆಯಿತು.


ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟದ ಕರ್ನಾಟಕ – ಕೇರಳ ರಾಜ್ಯದ ಅಧ್ಯಕ್ಷೆ ಸುಶೀಲಾ ನಾಡ ಅವರು ಮಾತನಾಡಿ, ಸರಕಾರದ ಎಲ್ಲಾ ಯೋಜನೆಗಳು ಭೂಮಿ ಆಧಾರಿತವಾಗಿದ್ದು, ಭೂಮಿಯಿಂದ ವಂಚಿತರಾಗಿರುವ ಕೊರಗ ಕುಟುಂಬಗಳ ಅಭಿವೃದ್ಧಿಗೆ ಹಿನ್ನಡೆಯಾಗಿದ್ದಲ್ಲದೆ, ಯಾವುದೇ ಯೋಜನೆಗಳನ್ನು ಪಡೆಯಲು ಅಸಾಧ್ಯವಾಗಿದೆ ಎಂದು ಅವರು ಹೇಳಿದರು. ತಾಲೂಕಿನ ಕೊರಗ ಕುಟುಂಬಗಳು ವಾಸವಾಗಿರುವ ಮನೆಗಳಿಗೆ ಹಕ್ಕು ಪತ್ರವಿಲ್ಲ. ಈ ಬಗ್ಗೆ ಸರಕಾರಕ್ಕೆ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿಯನ್ನು ನೀಡಿದ್ದೇವೆಯಾದರೂ ಕಣ್ಣು ತೆರಸುವ ಕೆಲಸ ಆಗಿಲ್ಲ ಎಂದು ಆರೋಪ ಮಾಡಿದರು.


1994 ರಲ್ಲಿ ಕೊರಗ ಸಮುದಾಯದ ವಿಶೇಷ ಅಧ್ಯಯನ ನಡೆಸಿರುವ ಡಾ.ಮಹಮ್ಮದ್ ಪೀರ್ ಅವರ ವರದಿಯಲ್ಲಿ ಕೊರಗ ಸಮುದಾಯದ ಅಭಿವೃದ್ಧಿಗೆ ಎರಡುವರೆ ಎಕರೆ ಕೃಷಿ ಭೂಮಿಯನ್ನು ನೀಡಿ, ಅವರು ಮಾದರಿ ಕೃಷಿಕರಾಗುವಂತೆ ಪುನರ್ ವಸತಿ ವ್ಯವಸ್ಥೆಗಳನ್ನು ಮಾಡುವುದು ಅತ್ಯಗತ್ಯ ಎಂದು ಮಾಡಿದ ಶಿಫಾರಸಿನ ಮೇಲೆ ಯಾವ ಕ್ರಮವೂ ಆಗಿಲ್ಲ,ಸರಕಾರ ಕಾರ್ಯರೂಪಕ್ಕೆ ತಂದಿಲ್ಲ ಎಂದು ಆರೋಪ ಮಾಡಿದರು.
ಭೂರಹಿತರಾಗಿ ಜೀವನವನ್ನು ಅತೀ ಕಷ್ಟದಲ್ಲಿ ಮಾಡುವಂತಾಗಿದೆ.ಯಾವುದೇ ರೀತಿಯ ಜೀವನ ಬದ್ಧತೆ ಅನ್ನುವುದು ಸಿಕ್ಕುತ್ತಿಲ್ಲ, ಭೂಮಿಯ ಹಕ್ಕಿನಿಂದ ವಂಚಿತರಾದ ಕೊರಗ ಕುಟುಂಬಗಳು ಸರಕಾರದ ಯೋಜನೆಗಳಿಂದಲೂ ವಂಚಿತರಾಗಿವೆ ಎಂದು ಹೇಳಿದರು.

2014 ರಲ್ಲಿ ಕೊರಗ ಸಮುದಾಯ ಭವನ ನಿರ್ಮಾಣಕ್ಕೆ 11 ಸೆಂಟ್ಸ್ ಜಾಗವನ್ನು ಕಾದಿರಿಸಿದೆಯಾದರೂ ಆರ್.ಟಿ.ಸಿ.ಮಂಜೂರಾತಿಯಾಗಿಲ್ಲ, ಭವನ ನಿರ್ಮಾಣಕ್ಕೆ ಯಾವುದೇ ಕ್ರಮವನ್ನು ಇಲಾಖೆ ಕೈಗೊಂಡಿಲ್ಲ ಎಂದು ಆರೋಪ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ನವೀನ್ ,ಜಿಲ್ಲಾ ಸಂಯೋಜಕ ಪುತ್ರ ಕೆ, ತಾಲೂಕು ಅಧ್ಯಕ್ಷ ರಮೇಶ್, ಮಹಿಳಾ ಅಧ್ಯಕ್ಷೆ ಲಲಿತಾ ,ಕಾರ್ಯದರ್ಶಿ ಶೀನಾ,ಪುತ್ತೂರು ಸಂಘದ ಸದಸ್ಯ ಬಾಬು, ಹಾಗೂ ಸದಸ್ಯರುಗಳು ಹಾಜರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!