ಮಂಗಳೂರು-ಬೆಂಗಳೂರು ಪ್ರಯಾಣಿಕರಿಗೆ ಆತಂಕ – ಜನಪ್ರಿಯ ರೈಲು ಸಮಯ ಬದಲಾವಣೆಯ ಚರ್ಚೆ

ಮಂಗಳೂರು : ಅದ್ಯಾಕೋ ಏನೋ ರೈಲ್ವೇಗೆ ಮಂಗಳೂರಿಗರೆಂದರೆ ಭಾರಿ ಸದರ, ಏನು ಮಾಡಿದರೂ ಮಾತನಾಡುವುದಿಲ್ಲ ಎಂಬ ನಂಬಿಕೆ. ಆದ್ದರಿಂದ ಅದು ಇರುವ ಸೌಲಭ್ಯಗಳನ್ನು ಮೊಟಕು ಮಾಡಲು ಹೊರಟಿದೆ. ಆ ಕುರಿತ ಒಂದು ಸ್ಟೋರಿ ಇದು.
ಮಂಗಳೂರು ರೈಲು ನಿಲ್ದಾಣ ಅತ್ಯಂತ ಹಳೆಯ ನಿಲ್ದಾಣಗಳಲ್ಲಿ ಒಂದು. ಮಂಗಳೂರಿನ ಹಂಚು ಸಾಗಾಟಕ್ಕಾಗಿ ಇಲ್ಲಿಗೆ ರೈಲು ಮಾರ್ಗ ಬಂತು. ಹಂಚಿನ ಕಾಲ ಮುಗಿಯಿತು. ರೈಲು ಪ್ರಯಾಣ ಮರುರೂಪಿಸಲ್ಪಟ್ಟ ಕಾಲಘಟ್ಟ ಇದು.ಆದರೆ ಮಂಗಳೂರಿನ ಮಟ್ಟಿಗೆ ನೆಮ್ಮದಿಯ ರೈಲು ಪ್ರಯಾಣ ಎಂದರೆ ಅದೊಂದು ಕನಸು ಎಂಬಂತಾಗುತ್ತಿದೆ.

ಬೆಂಗಳೂರು ಮತ್ತು ಮಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದಾಗಿ ಸಿಹಿ ಸುದ್ದಿ ನೀಡಬೇಕಿದ್ದ ರೈಲ್ವೆ ಇಲಾಖೆ ಕರಾವಳಿಗರಿಗೆ ಡಬಲ್ ಆಘಾತವನ್ನು ನೀಡಿದೆ. ಹೆಚ್ಚಿನ ಸೌಕರ್ಯ ಕೊಡುವ ಬದಲು ಇದ್ದ ಸೌಕರ್ಯವನ್ನೂ ಕಿತ್ತುಕೊಳ್ಳುವ ಇಂಗಿತವನ್ನು ಅದು ತೋರಿಸುತ್ತಿದೆ. ಈ ನಡೆಗೆ ಮಂಗಳೂರಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮೊದಲನೆಯದಾಗಿ, ವಂದೇಭಾರತ್ ರೈಲು ಬೆಂಗಳೂರು ಹಾಗೂ ಮಂಗಳೂರು ಮಧ್ಯೆ ಓಡಲಿದೆಯಾದರೂ ಅದು ಮಂಗಳೂರು ನಗರಕ್ಕೆ ಬರುವುದಿಲ್ಲ. ಬದಲಿಗೆ ಪಡೀಲ್ ಮೂಲಕ ನೇರ ಗೋವಾಕ್ಕೆ ಹೋಗಲಿದೆ.

ಎರಡನೆಯದಾಗಿ, ಈ ಗೋವಾಕ್ಕೆ ಹೋಗುವ ರೈಲಿನ ವೇಳಾಪಟ್ಟಿಗೋಸ್ಕರ ಹಗಲಿನಲ್ಲಿ ಬೆಂಗಳೂರು-ಮಂಗಳೂರು ಮಧ್ಯೆ ಸಾವಿರಾರು ಪ್ರಯಾಣಿಕರನ್ನು ಕರೆದೊಯ್ಯುವ ಗೊಮ್ಮಟೇಶ್ವರ ಎಕ್ಸ್ ಪ್ರೆಸ್ (16575/16576) ವೇಳಾಪಟ್ಟಿಯನ್ನು ಬದಲಿಸಲು ಇಲಾಖೆ ನಿರ್ಧರಿಸಿದೆ. ಈ ಮೂಲಕ ಸಿಹಿಸುದ್ದಿಯ ಬದಲು ಡಬಲ್ ಶಾಕ್ ನೀಡಿದೆ.

ದಕ್ಷಿಣ ಕನ್ನಡ, ಹಾಸನ ಹಾಗೂ ಬೆಂಗಳೂರಿನ ಪ್ರಯಾಣಿಕರು ಸುಲಭವಾಗಿ ದಿನದ ಪ್ರಯಾಣದಲ್ಲಿ ರಾತ್ರಿಗೆ ಮೊದಲು ಗೊಮಟೇಶ್ವರ ಎಕ್ಸ್ ಪ್ರಸ್ ನಲ್ಲಿ ಬೆಂಗಳೂರು/ಮಂಗಳೂರು ತಲುಪುತ್ತಿದ್ದರು. ಇನ್ನು ಮುಂದೆ ಮಧ್ಯಾಹ್ನ ಪ್ರಯಾಣ ಆರಂಭಿಸಿ, ತಡರಾತ್ರಿ ಮಂಗಳೂರು/ಬೆಂಗಳೂರು ತಲುಪುವ ಸಂಭವವಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಸಾವಿರಾರು ಪ್ರಯಾಣಿಕರಿಗೆ ಮುಖ್ಯವಾಗಿ ವಿದ್ಯಾರ್ಥಿಗಳು, ರೋಗಿಗಳು, ಉದ್ಯೋಗಿಗಳು, ಮಹಿಳೆಯರಿಗೆ ಈ ರೈಲಿನ ಅನುಕೂಲವೇ ತಪ್ಪಿಹೋಗಲಿದೆ ಎಂಬ ಆಕ್ರೋಶ ರೈಲ್ವೇ ಯಾತ್ರಿಗಳಿಂದ ವ್ಯಕ್ತವಾಗಿದೆ.

2017 ರ ಎಪ್ರಿಲ್ 9 ರಂದು ಆಗಿನ ಕೇಂದ್ರ ರೈಲ್ವೆ ಮಂತ್ರಿ ಸುರೇಶ್ ಪ್ರಭು ಅವರು ಮಂಗಳೂರು ಜಂಕ್ಷನ್‌ನಿಂದ ಗೋಮಟೇಶ್ವರ ಎಕ್ಸ್‌ಪ್ರೆಸ್ ಎಂಬ ಹೆಸರಿನ ಈ ರೈಲಿಗೆ ಚಾಲನೆ ನೀಡಿದ್ದರು. ಹಿಂದೆ ರೈಲು ಸಂಖ್ಯೆ 16575 ಯಶವಂತಪುರ -ಮಂಗಳೂರು ಜಂಕ್ಷನ್ ಮಧ್ಯೆ ಗೊಮಟೇಶ್ವರ ಎಕ್ಸ್‌ಪ್ರೆಸ್ ರೈಲು ಯಶವಂತಪುರ ಜಂಕ್ಷನ್‌ನಿಂದ ಬೆಳಗ್ಗೆ7 ಕ್ಕೆ ಹೊರಟು ಮಂಗಳೂರು ಜಂಕ್ಷನ್ ಗೆ ಸಂಜೆ 4:40 ಕ್ಕೆ ತಲುಪುತ್ತಿತ್ತು. ಮರುದಿನ 16576 ರೈಲು ಬೆಳಗ್ಗೆ 11:30 ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ರಾತ್ರಿ 8:45 ಕ್ಕೆ ಯಶವಂತಪುರ ತಲುಪಬೇಕಿತ್ತು. ಮಾರ್ಗ ಮಧ್ಯೆ ತಡವಾಗಿ ಸಂಚರಿಸುವಾಗ ನಿಗದಿತ ಸಮಯದ ಬದಲು ತಡರಾತ್ರಿ ಬೆಂಗಳೂರು ತಲುಪುತ್ತಿದ್ದುದು ಸಮಸ್ಯೆಯಾಗಿತ್ತು. ಸತತ ಒತ್ತಾಯದ ಬಳಿಕ 2024 ರಿಂದ 16576 ರೈಲು ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಸಂಜೆ 4:30ಕ್ಕೆ ಯಶವಂತಪುರ ಜಂಕ್ಷನ್ ತಲುಪುತ್ತಿದೆ.

ಈಗ ಬೆಂಗಳೂರಿನಿಂದ ಮಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಿಸಬೇಕೆಂಬ ಬೇಡಿಕೆ ಕಡೆಗಣಿಸಿ, ಮಂಗಳೂರು ನಗರ ಪ್ರವೇಶಿಸದೆ ಪಡೀಲ್ ಬೈಪಾಸ್ ಮೂಲಕವೇ ಬೆಂಗಳೂರಿನಿಂದ ಗೋವಾಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಿಸುವ ಪ್ರಸ್ತಾವನೆ ರೈಲ್ವೆ ಇಲಾಖೆಯಲ್ಲಿದೆ. ಈ ರೈಲು ಓಡಿಸುವ ಸಲುವಾಗಿ ಮಂಗಳೂರು-ಬೆಂಗಳೂರು ನಡುವೆ ಪ್ರಯಾಣಿಕರು ಆಶ್ರಯಿಸಿರುವ ಗೊಮಟೇಶ್ವರ ಎಕ್ಸ್ ಪ್ರೆಸ್ ನ ವೇಳಾಪಟ್ಟಿಯಲ್ಲಿ ಮಾರ್ಪಾಡು ಮಾಡುತ್ತಿರುವುದಕ್ಕೆ ಕರಾವಳಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಪ್ರಸ್ತಾವಿತ ಬೆಂಗಳೂರು-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರು ನಗರಕ್ಕೆ ಬಾರದೆ ಇದ್ದರೂ ಸಮಸ್ಯೆಯಿಲ್ಲ, ಆದರೆ ಜನಸಾಮಾನ್ಯರು ನೆಚ್ಚಿಕೊಂಡಿರುವ ರೈಲು ಸಂಖ್ಯೆ 16575/76 ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂಬುದು ಕರಾವಳಿಗರ ಆಗ್ರಹವಾಗಿದೆ.

ರೈಲ್ವೇ ಮಂಡಳಿಯವರು ಈ ತೀರ್ಮಾನವನ್ನು ಮಾಡಿದ್ದರೂ, ನೈರುತ್ಯ ರೈಲ್ವೇ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ನಮಗೆ ಯಾವುದೇ ವೇಳಾಪಟ್ಟಿ ಬಂದಿಲ್ಲ, ಹಾಗಾಗಿ ಈಗಲೇ ಏನೂ ಹೇಳುವಂತಿಲ್ಲ ಎನ್ನುತ್ತಾರೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು.

ಈ ಬಗ್ಗೆ ರೈಲ್ವೆ ಇಲಾಖೆ, ರೈಲ್ವೆ ಮಂತ್ರಿಗಳಿಗೆ ಜಿಲ್ಲೆಯ ರೈಲ್ವೆ ಪ್ರಯಾಣಿಕರ ಹಿತರಕ್ಷಣ ಸಮಿತಿಗಳು ಮನವಿ ಮಾಡಿವೆ. ಬೆಂಗಳೂರು-ಗೋವಾ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಪಡೀಲ್ ಬೈಪಾಸ್ ಮೂಲಕ ಓಡಲಿ, ಮಂಗಳೂರು ಜಂಕ್ಷನ್ ಮೂಲಕ ಬೇಕಾದರೂ ಓಡಲಿ. ಆದರೆ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ಬಲಿಯಾಗದೆ ಇರಲಿ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ಆರಂಭಗೊಂಡಿದ್ದು, ಗೊಮ್ಮಟೇಶ್ವರ ಎಕ್ಸ್ ಪ್ರೆಸ್ ರೈಲು ತಡೆ ಮೂಲಕ ಪ್ರತಿಭಟನೆಗೂ ಸಿದ್ಧ ಎಂದು ಹೇಳಲಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!