ಮಂಗಳೂರು: ಭೂ ವ್ಯವಹಾರದಲ್ಲಿ ಮೋಸ ಮಾಡಿದ ಸಿಟ್ಟಿನಿಂದ ಯುವಕನೋರ್ವ ಸ್ಕೂಟರ್ಗೆ ಕಾರು ಡಿಕ್ಕಿ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಗಾಯಗೊಂಡವರನ್ನು ಮೋಹನ್ ದಾಸ್ ಶೆಟ್ಟಿ ಎಂದು ಗುರುತಿಸಲಾಗಿದೆ. ಆರೋಪಿ ಮೊಹಮ್ಮದ್ ಶರೀಫ್ ಆಗಿದ್ದು, ಈತನ ತಂದೆ ಮಹಮ್ಮದ್ ಇಕ್ಬಾಲ್ ಜೊತೆಗೆ ಮೋಹನ್ ದಾಸ್ ಶೆಟ್ಟಿ ಅವರ ನಡುವೆ ಭೂ ವ್ಯವಹಾರ ನಡೆದಿದೆ.
ಸುರತ್ಕಲ್ನ ಖಾನ ಮತ್ತು ವಾಮಂಜೂರು ಪ್ರದೇಶಗಳಲ್ಲಿ ಸುಮಾರು 2 ಕೋಟಿ ರೂಪಾಯಿ ಹೂಡಿಕೆ ಮಾಡಿದ ಆರೋಪಿತನು, ತನ್ನಿಗೆ ಮೋಸವಾಗಿದೆ ಎಂಬ ಅಸಮಾಧಾನದಿಂದ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಆರ್ಯ ಸಮಾಜ ರಸ್ತೆಯ ಬಳಿ ಇಬ್ಬರ ನಡುವೆ ಮಾತುಕತೆ ನಡೆದ ವೇಳೆ, ಆರೋಪಿತನು ಮೋಹನ್ ದಾಸ್ ಶೆಟ್ಟಿಯ ಮೊಬೈಲ್ ಕಸಿದುಕೊಂಡಿದ್ದಾನೆ ಎನ್ನಲಾಗಿದೆ.
ನಂತರ ಮೋಹನ್ ದಾಸ್ ಶೆಟ್ಟಿ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಆರೋಪಿತನು ತನ್ನ ಇನೋವಾ ಕ್ರಿಸ್ಟಾ ಕಾರನ್ನು ಅತಿ ವೇಗದಲ್ಲಿ ಚಲಾಯಿಸಿ ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.