ಮಂಗಳೂರು: ಲಿಂಗಾನುಪಾತ ಹದಗೆಡಲು ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ಪ್ರಮುಖ ಕಾರಣವಾಗಿದ್ದು, ಈ ದುಷ್ಪ್ರಥೆಯನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ವೆನ್‍ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ–1994 ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಗು ಹುಟ್ಟಿದರೆ ಶಿಕ್ಷಣ, ವರದಕ್ಷಿಣೆ ಹಾಗೂ ವಿವಾಹ ವೆಚ್ಚ ಭರಿಸಬೇಕೆಂಬ ಮನೋಭಾವದಿಂದ ಕುಟುಂಬಕ್ಕೆ ಹೊರೆ ಎಂಬ ತಪ್ಪು ಕಲ್ಪನೆ ಬೆಳೆದಿದೆ. ಈ ಮನಸ್ಥಿತಿಯನ್ನು ಸಮಾಜದಿಂದ ದೂರ ಮಾಡುವುದು ಅತ್ಯಾವಶ್ಯಕ. ಹೆಣ್ಣುಮಕ್ಕಳ ಮೇಲಿನ ತಾತ್ಸಾರ ಭಾವನೆ ನಿವಾರಣೆ ಮಾಡಿ, ಗಂಡು-ಹೆಣ್ಣು ಭೇದವಿಲ್ಲದೆ ಸಮಾನ ಅವಕಾಶಗಳನ್ನು ನೀಡಬೇಕು ಎಂದು ಅವರು ಕರೆ ನೀಡಿದರು.
ಬಾಲ್ಯವಿವಾಹ, ಮೂಢನಂಬಿಕೆಗಳು ಹಾಗೂ ಗಂಡುಮಗುವಿನ ಮೇಲಿನ ಆಸೆಯಿಂದ ವೈದ್ಯಕೀಯ ತಂತ್ರಜ್ಞಾನಗಳ ದುರುಪಯೋಗದ ಮೂಲಕ ಭ್ರೂಣ ಲಿಂಗ ಪತ್ತೆ ಮಾಡಿ ಹೆಣ್ಣು ಶಿಶುಗಳ ಹತ್ಯೆ ನಡೆಯುತ್ತಿರುವುದು ಮಹಿಳಾ ಜನಸಂಖ್ಯೆ ಕುಸಿತಕ್ಕೆ ಕಾರಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್. ಆರ್. ತಿಮ್ಮಯ್ಯ ಮಾತನಾಡಿ, ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆಯಡಿ ಸ್ಕ್ಯಾನಿಂಗ್ ಕೇಂದ್ರಗಳು ಎಲ್ಲಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾಯ್ದೆ ಉಲ್ಲಂಘನೆಗೆ ಯಾವುದೇ ವಿನಾಯಿತಿ ಇಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕ್ಷೇಮ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ರೇಡಿಯಾಲಜಿಸ್ಟ್ ಡಾ. ರಘುರಾಜ್ ಅವರು ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆಯ ಕುರಿತು ಹಾಗೂ ಎ.ಜೆ. ಮೆಡಿಕಲ್ ಕಾಲೇಜು ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಅಮೃತಾ ಭಂಡಾರಿ ಅವರು ಎಂ.ಟಿ.ಪಿ ಕಾಯ್ದೆಯ ಕುರಿತು ವಿವರ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಉಸ್ಮಾನ್ ಎ., ಐ.ಆರ್.ಐ.ಎ ಅಧ್ಯಕ್ಷ ಡಾ. ಪ್ರವೀಣ್ ಜೆ. ಜಾನ್, ಐ.ಎಂ.ಎ ಅಧ್ಯಕ್ಷ ಸದಾನಂದ ಪೂಜಾರಿ, ಎಫ್.ಒ.ಜಿ.ಎಸ್.ಐ ಅಧ್ಯಕ್ಷ ಡಾ. ಪ್ರದೀಪ್ ಗಾಣಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಿಲ್ಲಾ ಅನುಷ್ಠಾನ ಅಧಿಕಾರಿ ಡಾ. ದೀಪಾ ಪ್ರಭು ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಕಾರ್ಯಕ್ರಮ ನಿರೂಪಿಸಿದರು.