ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋರಿಕ್ಷಾ ಚಾಲಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಆಟೋ ರಿಕ್ಷಾ, ಟೂರಿಸ್ಟ್ ಮತ್ತು ಭಾರೀ ವಾಹನ ಚಾಲಕರ ಸಂಘ (ಎಐಸಿಸಿಟಿಯು) ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ವಾಹನಗಳ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಆಟೋ ಚಾಲಕರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಜೊತೆಗೆ ಮಂಗಳೂರು ನಗರದಲ್ಲಿ ರಿಕ್ಷಾ ಪಾರ್ಕಿಂಗ್ ಸಮಸ್ಯೆ, ಬೈಕ್ ಟ್ಯಾಕ್ಸಿಗಳು ಹಾಗೂ ಓಲಾ, ಉಬರ್, ನಮ್ಮ ಯಾತ್ರಿ ಮುಂತಾದ ಆಪ್ ಆಧಾರಿತ ಸೇವೆಗಳಿಂದ ತೀವ್ರ ತೊಂದರೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಬ್ಯಾಟರಿ ಚಾಲಿತ ಆಟೋರಿಕ್ಷಾಗಳು ಪರವಾನಿಗೆಯಿಲ್ಲದೆ ಜಿಲ್ಲೆಯಾದ್ಯಂತ ಸಂಚರಿಸುತ್ತಿರುವುದು ಖಂಡನೀಯವಾಗಿದ್ದು, ಅವುಗಳಿಗೆ ಶೀಘ್ರ ಪರವಾನಿಗೆ ನೀಡಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಮೋಹನ್ ಕೆ.ಇ., ಜಿಲ್ಲಾ ಮುಖಂಡ ಅನ್ಸಾರ್, ದಕ್ಷಿಣ ಕನ್ನಡ ಆಟೋ ಚಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ ಸೇರಿದಂತೆ ಸಂದೀಪ್, ಅಸ್ಪಕ್ ದಿನೇಶ್ ಬಾಬು, ಜಾವಿದ್, ಇಂಯ್ತಿಯಾಝ್, ಯೋಗೇಂದ್ರ, ಜಾರ್ಜ್ ಮತ್ತಿತರರು ಉಪಸ್ಥಿತರಿದ್ದರು.