ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಚಾಲನೆ: ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವರು

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಆರಂಭವಾಗಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರು ಬೆಂಗಳೂರಿನ ಮಲ್ಲೇಶ್ವರಂನ 13ನೇ ಅಡ್ಡರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ (ಕೆಪಿಎಸ್) ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅವರು ಆತ್ಮಸ್ಥೈರ್ಯ ತುಂಬಿ ಶುಭ ಹಾರೈಸಿದರು.

ಈ ವರ್ಷ ರಾಜ್ಯಾದ್ಯಂತ ಒಟ್ಟು 8,65,988 ವಿದ್ಯಾರ್ಥಿಗಳು 2,870 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ವಿಶೇಷವಾಗಿ 16 ದೃಷ್ಟಿಮಾಂದ್ಯ ಮಕ್ಕಳು ಬರಹಗಾರರ ಸೌಲಭ್ಯ ಬಳಸದೆ, ಸ್ವತಃ ಲ್ಯಾಪ್‌ಟಾಪ್ ಬಳಸಿ ಪರೀಕ್ಷೆ ಬರೆಯುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ.

ಸರ್ಕಾರಿ ಶಾಲೆಗಳ 3,59,594 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 2,11,486 ವಿದ್ಯಾರ್ಥಿಗಳು ಹಾಗೂ ಅನುದಾನರಹಿತ ಶಾಲೆಗಳ 2,94,908 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಸಚಿವರು, “ಮಕ್ಕಳು ಯಾವುದೇ ಒತ್ತಡವಿಲ್ಲದೆ, ಭಯಮುಕ್ತರಾಗಿ ಪರೀಕ್ಷೆ ಎದುರಿಸಬೇಕು. ಪೋಷಕರು ಸಹ ಮಕ್ಕಳ ಮೇಲೆ ಒತ್ತಡ ಹೇರಬಾರದು. ಪರೀಕ್ಷಾ ಸಿದ್ಧತೆಗಾಗಿ ಈಗಾಗಲೇ 3 ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದು ಮಕ್ಕಳಲ್ಲಿನ ಭಯವನ್ನು ಹೋಗಲಾಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳು ಆಮಿಷಗಳಿಗೆ ಒಳಗಾಗಿ ತಪ್ಪು ದಾರಿ ಹಿಡಿದು ಮೊಸಹೋಗಬಾರದು” ಎಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿನಂತಿಸಿದರು.

ಪರೀಕ್ಷಾ ಅಕ್ರಮಗಳನ್ನು ತಡೆಯಲು ಎಲ್ಲ ಕೇಂದ್ರಗಳಲ್ಲೂ ವೆಬ್‌ಕಾಸ್ಟಿಂಗ್ ಮೂಲಕ ನಿಗಾ ವಹಿಸಲಾಗಿದೆ. ಪ್ರತಿದಿನ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿ ಪೋಲೀಸ್ ಸಿಬ್ಬಂದಿಯೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗುತ್ತಿದೆ. ಆಯಾ ಜಿಲ್ಲಾ ಆಡಳಿತದ ಮೂಲಕ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. “ಭಯಮುಕ್ತರಾಗಿ ಸಂತಸದಿಂದ ಪರೀಕ್ಷೆ ಬರೆಯಿರಿ, ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ” ಎಂದು ಮಂಡಲಿ ಹಾರೈಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!