ಮಂಗಳೂರು: ಕರಾವಳಿಯ ದೈವಾರಾಧನೆ ತನ್ನದೇ ಆದ ಸಂಪ್ರದಾಯ ಮತ್ತು ಕಟ್ಟುಪಾಡುಗಳನ್ನು ಅನುಸರಿಸುತ್ತಾ ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಇದರ ಕುರಿತು ಉಂಟಾಗುತ್ತಿರುವ ವಿವಾದ ಹಾಗೂ ಅಪಪ್ರಚಾರಗಳು ಗೊಂದಲಕ್ಕೆ ಕಾರಣವಾಗಿವೆ.
ಇತ್ತೀಚೆಗೆ ತುಳು ವಿದ್ವಾಂಸರೂ ಆಗಿರುವ ಪಂಬದ ಸಮುದಾಯದ ಸಂಶೋಧಕಿ ಡಾ. ರತಿ ಅವರು ಪತ್ರಿಕಾಗೋಷ್ಠಿ ನಡೆಸಿ, ಮಂಗಳೂರಿನ ಬೋಳೂರು ಜಾರಂದಾಯ ದೈವಸ್ಥಾನದಲ್ಲಿ ಬಂಟ ದೈವವನ್ನು ಕ್ರೈಸ್ತ ಸಮುದಾಯದ ಯುವಕ ಕಟ್ಟಿರುವುದಾಗಿ ಆರೋಪಿಸಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ದೈವ ನರ್ತಕ ಸುಶಾಂತ್ ಬಂಗೇರ ಹಾಗೂ ಅವರ ಕುಟುಂಬದವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರೋಪಗಳನ್ನು ಖಂಡಿಸಿದರು.
ಸುಶಾಂತ್ ಅವರ ತಾಯಿ ಮಾತನಾಡಿ, “ನಾನು ಕ್ರೈಸ್ತ ಧರ್ಮದಲ್ಲಿ ಹುಟ್ಟಿದ್ದರೂ, ಬಳಿಕ ಪಿಟ್ಟಿ ಗಣೇಶ ಪಂಬದ ಅವರನ್ನು ವಿವಾಹವಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇನೆ. ಹಿಂದೂ ಸಂಪ್ರದಾಯಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಿದ್ದೇನೆ. ನನ್ನ ಮಗನು ಪಾರಂಪರಿಕವಾಗಿ ದೈವ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಆದರೆ ವೈಯಕ್ತಿಕ ದ್ವೇಷದಿಂದ ಕೆಲವರು ಅವನ ಮೇಲೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ,” ಎಂದು ಹೇಳಿದರು.
ಇನ್ನು ಮಾತನಾಡಿದ ದೈವ ನರ್ತಕ ಸುಶಾಂತ್ ಬಂಗೇರ, “ಕಳೆದ 7–8 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ನೇಮ ಕಟ್ಟುವ ಸೇವೆ ಸಲ್ಲಿಸುತ್ತಿದ್ದೇನೆ. ಸಜಿಪ್ಪ, ಅಲೆಂಗಾಡಿ ಸೇರಿದಂತೆ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥ ದೇವಾಲಯದಲ್ಲೂ ನೇಮ ಕಟ್ಟಿದ್ದೇನೆ. ಆಗ ಯಾವುದೇ ಪ್ರಶ್ನೆ ಉದ್ಭವಿಸದಿದ್ದರೆ, ಈಗ ಮಾತ್ರ ನನ್ನ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ನಾನು ಹಿಂದೂ ಧರ್ಮದ ಪಂಬದ ಸಮುದಾಯಕ್ಕೆ ಸೇರಿದವನು ಎಂಬುದಕ್ಕೆ ಅಗತ್ಯ ದಾಖಲೆಗಳಿವೆ,” ಎಂದು ಸ್ಪಷ್ಟಪಡಿಸಿದರು.
ಇನ್ನೊಂದೆಡೆ, ಕೋಲಧಾರಿ ದೈವ ನರ್ತಕ ಗಣೇಶ್ ಪಂಬದ ಚಿಪ್ಪಾರು ಬಾಯಾರು ಮಾತನಾಡಿ, “ನಾವು ಪಾರಂಪರಿಕ ದೈವ ನರ್ತಕ ಕುಟುಂಬದಿಂದ ಬಂದವರು. ನಮ್ಮ ಅಜ್ಜ ಹಾಗೂ ತಂದೆಯವರ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಕರ್ನಾಟಕ ಹಾಗೂ ಕೇರಳ ಗಡಿಭಾಗದ ಅನೇಕ ದೈವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಬೋಳೂರು ಜಾರಂದಾಯ ದೈವಸ್ಥಾನದ ಸಮಿತಿಯವರು ಆಹ್ವಾನಿಸಿದ ಹಿನ್ನೆಲೆಯಲ್ಲಿ ಸಂಪ್ರದಾಯದ ಪ್ರಕಾರ ನೇಮ ನೆರವೇರಿಸಿದ್ದೇವೆ. ಆದರೆ ಕೆಲವರು ಆಧಾರವಿಲ್ಲದೆ ಆರೋಪ ಮಾಡುತ್ತಿದ್ದಾರೆ,” ಎಂದು ಹೇಳಿದರು.
“ಕ್ರೈಸ್ತ ಸಮುದಾಯದವರು ನೇಮ ಕಟ್ಟಿದ್ದಾರೆ ಎಂಬ ಆರೋಪ ಸಂಪೂರ್ಣ ಸುಳ್ಳಾಗಿದೆ. ಸಂಬಂಧಿಸಿದ ವ್ಯಕ್ತಿ ಹಿಂದೂ ಧರ್ಮಕ್ಕೆ ಸೇರಿದವನೆಂಬುದಕ್ಕೆ ದಾಖಲೆಗಳಿವೆ,” ಎಂದು ಅವರು ಹೇಳಿದರು.
ಈ ವಿಚಾರವನ್ನು ಮಾಧ್ಯಮಗಳ ಮೂಲಕ ಚರ್ಚಿಸುವುದಕ್ಕಿಂತ ಸಮುದಾಯದ ಒಳಗೆ ಅಥವಾ ಸಂಘದ ಮಟ್ಟದಲ್ಲಿ ಕೂತು ಪರಿಹರಿಸಬೇಕಾದ ವಿಷಯ ಎಂದು ಅವರು ಅಭಿಪ್ರಾಯಪಟ್ಟರು. ಈಗಾಗಲೇ ಈ ಸಂಬಂಧ ಕೆಲವು ವ್ಯಕ್ತಿಗಳು ಸಮುದಾಯಕ್ಕೆ ದೂರು ನೀಡಿದ್ದು, ಸಂಬಂಧಿಸಿದ ಸಮಿತಿ ಮತ್ತು ಪದಾಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಒಟ್ಟಾರೆಯಾಗಿ, ದೈವಾರಾಧನೆಗೆ ಸಂಬಂಧಿಸಿದ ಈ ವಿವಾದವು ಕರಾವಳಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಸಮುದಾಯದ ಮಟ್ಟದಲ್ಲಿ ಇದರ ಕುರಿತು ಸ್ಪಷ್ಟನೆ ನಿರೀಕ್ಷಿಸಲಾಗಿದೆ.