ಮಂಗಳೂರು: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಮಂಗಳೂರು ಬಜಪೆ ಪೊಲೀಸರು ಪತ್ತೆಹಚ್ಚಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಮಾರ್ಚ್ 18ರಂದು ಬೆಳಗಿನ ಜಾವ ಸುಮಾರು 4:45ರ ಸುಮಾರಿಗೆ, ಬಡಗ ಎಡಪದವು ಗ್ರಾಮದ ಸಸ್ತಾವು ಪ್ರದೇಶದಲ್ಲಿ ಫಾರ್ಚೂನರ್ ಕಾರಿನಲ್ಲಿ ನಾಲ್ಕು ದನಗಳನ್ನು ಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ದಾಳಿ ನಡೆಸಿ ವಾಹನವನ್ನು ವಶಕ್ಕೆ ಪಡೆದರು.
ಎ.ಸಿ.ಪಿ ಶ್ರೀಕಾಂತ್ ಹಾಗೂ ಪಿ.ಐ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಲತಾ ಮತ್ತು ಅವರ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದರು.
ದಾಳಿಯ ವೇಳೆ ನಾಲ್ಕು ದನಗಳು, ಫಾರ್ಚೂನರ್ ಕಾರು, ಒಂದು ತಲವಾರ್ ಹಾಗೂ ಕಬ್ಬಿಣದ ರಾಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು ₹8.42 ಲಕ್ಷ ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಸಾರ್ ಮತ್ತು ಮೊಹಮ್ಮದ್ ಜಮಾಲುದ್ದೀನ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಅಕ್ರಮ ಜಾನುವಾರು ಸಾಗಾಟದ ಬಗ್ಗೆ ಯಾವುದೇ ಮಾಹಿತಿ ಇದ್ದರೆ ತಕ್ಷಣ ಪೊಲೀಸರಿಗೆ ತಿಳಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.