ಮಂಗಳೂರು ನಗರದಲ್ಲಿ ಸಿಟಿ ಬಸ್ ಸಮಸ್ಯೆ: ಅಧಿವೇಶನದಲ್ಲಿ ಶಾಸಕ ವೇದವ್ಯಾಸ ಕಾಮತ್ ಒತ್ತಾಯ

ಮಂಗಳೂರು: ನಗರ ವ್ಯಾಪ್ತಿಯಲ್ಲಿ ಅನೇಕ ಸಿಟಿ ಬಸ್‌ಗಳು ನಿಗದಿತ ಮಾರ್ಗಗಳಿಗೆ ಸಂಚರಿಸದಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದರು.

ನಗರದ ಕೆಲವು ಖಾಸಗಿ ಸಿಟಿ ಬಸ್‌ಗಳು ಆರ್ಥಿಕ ಕಾರಣಗಳನ್ನು ಉಲ್ಲೇಖಿಸಿ ಕೆಲ ಪ್ರದೇಶಗಳಿಗೆ ಸೇವೆಯನ್ನು ಕಡಿತಗೊಳಿಸಿರುವುದು, ಟ್ರಿಪ್‌ಗಳನ್ನು ರದ್ದುಪಡಿಸಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಬಸ್‌ಗಳನ್ನು ನಿಯೋಜಿಸಲಾಗಿದ್ದರೂ, ಅವುಗಳ ಸೇವೆಯೂ ನಂತರ ಸ್ಥಗಿತಗೊಂಡಿದೆ ಎಂದು ಅವರು ಆರೋಪಿಸಿದರು.

ಈ ಪರಿಣಾಮವಾಗಿ ಶಕ್ತಿನಗರ, ಬಜಾಲ್-ಪಡ್ಪು-ಕೊಟ್ಟಾರ, ಪಡೀಲ್-ಕಣ್ಣಗುಡ್ಡೆ, ಬೋಳೂರು ಮಾತಾ ಅಮೃತಾನಂದಮಯಿ ಪ್ರದೇಶದಿಂದ ರೈಲ್ವೆ ನಿಲ್ದಾಣದವರೆಗೆ, ಜಲ್ಲಿಗುಡ್ಡೆ ಹಾಗೂ ಸರಿಪಳ್ಳ ಭಾಗದ ನಿವಾಸಿಗಳು ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಈ ಸಮಸ್ಯೆಯನ್ನು ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ, ಆರ್‌ಟಿಒ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಗಮನಕ್ಕೆ ತಂದರೂ, ತಾತ್ಕಾಲಿಕ ಪರಿಹಾರ ಹೊರತುಪಡಿಸಿ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಶಾಸಕ ತಿಳಿಸಿದರು.

ಹೀಗಾಗಿ ಅಧಿವೇಶನದಲ್ಲಿಯೇ ವಿಷಯವನ್ನು ಎತ್ತಿಹಿಡಿದ ಅವರು, ಸಾರ್ವಜನಿಕರ ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!