ವೇಣೂರು ಕಂಬಳದಲ್ಲಿ ನಿರೂಪಕರ ಮಾತಿಗೆ ಆಕ್ಷೇಪ: ಛಾಯಾಗ್ರಾಹಕರಿಂದ ಮನವಿ

ಬಂಟ್ವಾಳ: ವೇಣೂರು ಕಂಬಳ ಕಾರ್ಯಕ್ರಮದಲ್ಲಿ ನಿರೂಪಕರೊಬ್ಬರು ಛಾಯಾಗ್ರಾಹಕರ ವೃತ್ತಿಯ ಕುರಿತು ಆಕ್ಷೇಪಾರ್ಹ ಪದ ಬಳಕೆ ಮಾಡಿದ ಹಿನ್ನೆಲೆ ಉಭಯ ಜಿಲ್ಲೆಯ ಛಾಯಾಗ್ರಾಹಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

South Canara Photographers Association ಅಧ್ಯಕ್ಷ ನವೀನ್ ರೈ ಪಂಜಳ ಅವರ ನೇತೃತ್ವದಲ್ಲಿ ಛಾಯಾಗ್ರಾಹಕರ ಪ್ರತಿನಿಧಿಗಳು ಕಂಬಳ ಸಮಿತಿ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ವೇಣೂರು ಕಂಬಳದಲ್ಲಿ ನಿರೂಪಕರಾಗಿದ್ದ ರಾಜೀವ್ ಶೆಟ್ಟಿ ಅವರು ಛಾಯಾಗ್ರಾಹಕರ ವೃತ್ತಿಯ ಬಗ್ಗೆ ಅವಮಾನಕಾರಿ ಹಾಗೂ ಅಗೌರವಪೂರ್ಣ ಮಾತುಗಳನ್ನು ಆಡಿದ್ದಾರೆ ಎಂದು ಅವರು ಆರೋಪಿಸಿದರು. ಈ ಮಾತುಗಳು ವಾಟ್ಸಾಪ್ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದು, ಛಾಯಾಗ್ರಾಹಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಆಧುನಿಕ ತಂತ್ರಜ್ಞಾನದ ದುರುಪಯೋಗದಿಂದಲೇ ವೃತ್ತಿಪರ ಛಾಯಾಗ್ರಾಹಕರಿಗೆ ಸವಾಲುಗಳು ಎದುರಾಗುತ್ತಿರುವ ಸಂದರ್ಭದಲ್ಲಿ, ಇಂತಹ ಹೇಳಿಕೆಗಳು ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

ಅಲ್ಲದೆ, ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಛಾಯಾಗ್ರಾಹಕರ ವೃತ್ತಿಯನ್ನು ಹೀನಾಯವಾಗಿ ಹೀಯಾಳಿಸಿರುವ ನಿರೂಪಕ ರಾಜೀವ್ ಶೆಟ್ಟಿಯವರನ್ನು ಕಂಬಳ ಸಮಿತಿಯಿಂದ ದೂರ ಮಾಡಬೇಕು ಹಾಗೂ ಅವರು ನಾಡಿನ ಸಮಸ್ತ ಛಾಯಾಗ್ರಾಹಕರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ತಮ್ಮ ಬೇಡಿಕೆಗಳಿಗೆ ತಕ್ಷಣ ಸ್ಪಂದನೆ ದೊರಕದಿದ್ದರೆ, ಮುಂದಿನ ಕಂಬಳ ಕಾರ್ಯಕ್ರಮಗಳಲ್ಲಿ ರಾಜೀವ್ ಶೆಟ್ಟಿ ನಿರೂಪಣೆ ಮಾಡುವ ಸ್ಥಳಗಳಲ್ಲಿ ಉಭಯ ಜಿಲ್ಲೆಯ ಛಾಯಾಗ್ರಾಹಕರು ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!