ಮಂಗಳೂರು: ದಕ್ಷಿಣ ಕನ್ನಡ ಮೋಟಾರ್ ಸ್ಪೋರ್ಟ್ಸ್ ಸಂಸ್ಥೆಯು ತನ್ನ 25ನೇ ವರ್ಷದ ಸಂಭ್ರಮದ ಅಂಗವಾಗಿ 400ನೇ ಸ್ಪರ್ಧೆಯಾಗಿ ಪ್ರತಿಷ್ಠಿತ ‘ಐಎಂಎಸ್‌ಸಿ ಆಫ್-ರೋಡ್ ಟ್ರೋಫಿ-2026’ ಅನ್ನು ಮಾ.28 ಮತ್ತು 29ರಂದು ಮಂಗಳೂರು ಸಮೀಪದ ಒಡ್ಡೂರು ಫಾರ್ಮ್‌ನಲ್ಲಿ ಆಯೋಜಿಸಿದೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಅಶ್ವಿನ್ ನಾಯಕ್ ಮಾಹಿತಿ ನೀಡಿ, ಈ ಸ್ಪರ್ಧೆಯಲ್ಲಿ ಒಟ್ಟು 11 ವಿಭಾಗಗಳಲ್ಲಿ 140ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳಲು ಸಜ್ಜಾಗಿದ್ದು, ಸುಮಾರು 3,000ಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸುವ ನಿರೀಕ್ಷೆಯಿದೆ. ಪ್ರೇಕ್ಷಕರ ಸೌಲಭ್ಯಕ್ಕಾಗಿ ಗಂಜಿಮಠದಿಂದ ಒಡ್ಡೂರು ಫಾರ್ಮ್‌ವರೆಗೆ ನಿರಂತರ ಉಚಿತ ಬಸ್ ಸೇವೆಯನ್ನು ಒದಗಿಸಲಾಗುವುದು ಎಂದು ಹೇಳಿದರು. ಕರಾವಳಿ ಭಾಗದ ಆಫ್-ರೋಡ್ ಸ್ಪರ್ಧೆಗೆ ಈ ಬಾರಿ ಹೊಸ ಮೆರುಗು ಸಿಗಲಿದೆ ಎಂದರು.
ವಿಜೇತರಿಗೆ ಒಟ್ಟು ₹15 ಲಕ್ಷ ಮೌಲ್ಯದ ನಗದು ಬಹುಮಾನ, ಟ್ರೋಫಿ ಹಾಗೂ ಉಡುಗೊರೆಗಳನ್ನು ನೀಡಲಾಗುವುದು.
ಮಾ.28ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಡಾ ವೈ ಭರತ್ ಶೆಟ್ಟಿ, ರಾಜೇಶ್ ನಾಯ್ಕ ಉಳಿಪಾಡಿಗುತ್ತು, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಮಾ.29ರಂದು ಸಂಜೆ ನಡೆಯುವ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಡಾ ವೈ ಭರತ್ ಶೆಟ್ಟಿ, ರಾಜೇಶ್ ನಾಯ್ಕ ಉಳಿಪಾಡಿಗುತ್ತು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವರು ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮೂಸಾ ಶರೀಫ್, ಸದಸ್ಯರಾದ ರೊನಾಲ್ಡ್ ಫರ್ನಾಂಡಿಸ್ ಹಾಗೂ ಒಡ್ಡೂರು ಫಾರ್ಮ್ ಆತಿಥ್ಯ ನಿರ್ವಾಹಕ ಕುಮಾರ್ ಆಳ್ವ ಉಪಸ್ಥಿತರಿದ್ದರು.