ಮಂಗಳೂರು ಸಮೀಪದ ತೊಕ್ಕೊಟ್ಟು ಫ್ಲೈಓವರ್ನಲ್ಲಿ ಇಂದು ಮುಂಜಾನೆ ಭೀಕರ ಹತ್ಯೆ ಘಟನೆ ನಡೆದಿದೆ. ಕಿನ್ಯ ಅಜ್ಜಿನಡ್ಕ ನಿವಾಸಿಯಾಗಿರುವ ಆರಿಫ್ ಎಂಬ ರೌಡಿಶೀಟರ್ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದಾನೆ.
ಧಕ್ಕೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದ ಆರಿಫ್, ಮುಂಜಾನೆ ಬೈಕ್ನಲ್ಲಿ ಮಂಗಳೂರಿನತ್ತ ತೆರಳುತ್ತಿದ್ದಾಗ ತೊಕ್ಕೊಟ್ಟು ಫ್ಲೈಓವರ್ ಬಳಿ ದುಷ್ಕರ್ಮಿಗಳು ಅವನನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ಮಾರಕಾಸ್ತ್ರಗಳನ್ನು ಬಳಸಿ ಹಲ್ಲೆ ನಡೆಸಿದ ಪರಿಣಾಮ ಆರಿಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆರಿಫ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದ ಹಿನ್ನೆಲೆ, ಈ ಹತ್ಯೆ ಹಳೆಯ ವೈಮನಸ್ಸಿನ ಪರಿಣಾಮವಾಗಿರಬಹುದೆಂದು ಶಂಕಿಸಲಾಗಿದೆ. ಘಟನೆ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.