ಬಂಟ್ವಾಳ: ಶ್ರೀ ಜಗದಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರ ಸೇವಾ ಸಮಿತಿ ( ರಿ.) ದೇವಿನಗರ – ದಡ್ಡಲಕಾಡು ಇಲ್ಲಿ ಮಾ.30 ರಿಂದ ಎ.4 ರ ವರೆಗೆ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ,ಶ್ರೀ ಚಂಡಿಕಾಯಾಗ ಹಾಗೂ ಸಹಪರಿವಾರ ದೇವರ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ ತಿಳಿಸಿದರು.ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸತ್ಯನಾರಾಯಣ ಭಟ್ ಶಿವಕ್ಷೇತ್ರ, ಇಜ್ಜ ಇವರ ನೇತ್ರತ್ವದಲ್ಲಿ, ವೇದಮೂರ್ತಿ ವಿದ್ಯಾಶಂಕರ ಭಟ್ ಇವರ ತಂತ್ರಿವರ್ಯದಲ್ಲಿ ವಿವಿಧ ವೈದಿಕ,ಧಾರ್ಮಿಕ,ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.ಮಾ.30 ರಂದು ಸಂಜೆ 3.30ಕ್ಕೆ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕ್ಷೇತ್ರಕ್ಕೆ ಹಸಿರುಹೊರೆಕಾಣಿಕೆ ಮೆರವಣಿಗೆ ಹೋಗಲಿದೆ.
ಮಾ.31 ರಂದು ತಂತ್ರಿವರ್ಯರ ಆಗಮನ,ವೈದಿಕ ಹಾಗೂ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.ಎ. 1 ರಂದು ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಸಂಗಮ ನಡೆಯಲಿದೆ .ಎ. 2 ರಂದು ಶ್ರೀ ದೇವರ ಬಿಂಬ ಪುನಃ ಪ್ರತಿಷ್ಠೆ ,ಬ್ರಹ್ಮಕಲಶಾಭಿಷೇಕ, ಜೀವ ಕಲಶಾಭಿಷೇಕ ಪರಿವಾರ ದೇವತಾ ಕಲಶಾಭಿಷೇಕ ಹಾಗೂ ಸುಧರ್ಮ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.
ಎ. 3 ರಂದು ಚಂಡಿಕಾ ಹವನ, ರಾತ್ರಿ ಶ್ರೀ ಭಗವತಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.ಎ. 4 ರಂದು ಮಹಮ್ಮಾಯಿ ಗುಳಿಗ ಸಾನಿಧ್ಯದಲ್ಲಿ ಮಾರಿ ಪೂಜೆ ನಡೆಯಲಿದೆ ಎಂದು ಅವರು ತಿಳಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಪೂಜಾರಿ, ಜೊತೆ ಕಾರ್ಯದರ್ಶಿ ದಾಮೋದರ ಜೆ.ಡಿ.ದೇವಿನಗರ ಉಪಸ್ಥಿತರಿದ್ದರು.