ಹಜ್ ಭವನಕ್ಕೆ ಜಾಗವಿದ್ದರೂ, ಅನುದಾನವೂ ಲಭ್ಯವಿದ್ದರೂ ಕಾಮಗಾರಿ ವಿಳಂಬವಾಗುತ್ತಿರುವುದೇಕೆ ಎಂದು ಪ್ರಶ್ನಿಸಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್, ಮಂಗಳೂರಿನಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹಜ್ ಭವನವನ್ನು ಕೂಡಲೇ ನಿರ್ಮಿಸಬೇಕು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯವನ್ನು ಮರುಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಗರದ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಜ್ ಯಾತ್ರಿಕರು ಎದುರಿಸುತ್ತಿರುವ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆದರು.ಭಾರತದಿಂದ ಪ್ರತಿ ವರ್ಷ ಸರಾಸರಿ 1.70 ಲಕ್ಷ ಮಂದಿ ಹಜ್ ಯಾತ್ರೆಗೆ ತೆರಳುತ್ತಿದ್ದು, ಕರ್ನಾಟಕದಿಂದ ಕರ್ನಾಟಕ ರಾಜ್ಯ ಹಜ್ ಸಮಿತಿ ಮೂಲಕ ಸುಮಾರು 7,000 ಮಂದಿಗೆ ಅವಕಾಶ ದೊರೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಸುಮಾರು 1,300 ಯಾತ್ರಿಕರು ಭಾಗವಹಿಸುತ್ತಾರೆ. ಆದರೆ ಮಂಗಳೂರಿನಲ್ಲಿ ಹಜ್ ಭವನದ ಕೊರತೆ ಹಾಗೂ ನೇರ ವಿಮಾನ ಸೌಲಭ್ಯ ಇಲ್ಲದ ಕಾರಣ ಯಾತ್ರಿಕರು ಬೆಂಗಳೂರಿಗೆ ತೆರಳಿ ನಾಲ್ಕು ದಿನಗಳ ಕಾಲ ತಂಗಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇದರಿಂದ ವಿಶೇಷವಾಗಿ ಹಿರಿಯ ನಾಗರಿಕರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಹಜ್ ಭವನ ನಿರ್ಮಾಣಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ₹10 ಕೋಟಿ ಅನುದಾನ ಘೋಷಣೆಯಾಗಿ ಹಲವು ವರ್ಷಗಳು ಕಳೆದಿದ್ದರೂ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಎಂದು ಅವರು ಆಕ್ಷೇಪಿಸಿದರು. ಮುಡಿಪು–ಬಜ್ಜಿಯ ಕೆಂಜಾರ್ ಪ್ರದೇಶದಲ್ಲಿ 3.5 ಎಕರೆ ಜಾಗ ಗುರುತಿಸಲಾಗಿದ್ದು, ಇನಾಯತ್ ಅಲಿ ಅವರು ತಮ್ಮ ಸ್ವಂತ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಜಾಗ ಹಾಗೂ ಅನುದಾನ ಎರಡೂ ಲಭ್ಯವಿದ್ದರೂ ಕಳೆದ ಒಂದೂವರೆ ವರ್ಷದಿಂದ ಟೆಂಡರ್ ಪ್ರಕ್ರಿಯೆ ಮುಂದುವರಿಯದಿರುವುದು ಸರ್ಕಾರದ ವೈಫಲ್ಯವನ್ನು ಸೂಚಿಸುತ್ತದೆ ಎಂದು ಟೀಕಿಸಿದರು.
ಕೊರೊನಾ ಅವಧಿಯವರೆಗೆ ಮಂಗಳೂರಿನಿಂದ ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯ ಇತ್ತಾದರೂ, ನಂತರ ಅದು ಸ್ಥಗಿತಗೊಂಡಿದೆ. ನೇರ ವಿಮಾನಕ್ಕೆ ಬೇಡಿಕೆ ಇಟ್ಟಾಗ ಪೂರಕ ಸೌಲಭ್ಯಗಳ ಕೊರತೆ ಎನ್ನುವ ಉತ್ತರ ನೀಡಲಾಗುತ್ತಿದೆ. ಕಳೆದ 10-15 ವರ್ಷಗಳಲ್ಲಿ ಇಲ್ಲದ ಸಮಸ್ಯೆ ಈಗ ಹೇಗೆ ಉದ್ಭವಿಸಿತು ಎಂದು ಪ್ರಶ್ನಿಸಿದರು. ಮಂಗಳೂರಿನಲ್ಲಿ ಸಾಕಷ್ಟು ಮಸೀದಿಗಳು, ಭವನಗಳು ಹಾಗೂ ಹೋಟೆಲ್‌ಗಳು ಇರುವುದರಿಂದ ಯಾತ್ರಿಕರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಸಾಧ್ಯವಿದೆ. ನೇರ ವಿಮಾನ ಸೌಲಭ್ಯ ಒದಗಿಸಿದರೆ ಉಡುಪಿ ಮತ್ತು ಕಾಸರಗೋಡು ಸೇರಿದಂತೆ ಸುಮಾರು 3ರಿಂದ 4 ಸಾವಿರ ಯಾತ್ರಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮುಂದಿನ ವರ್ಷದ ಹಜ್ ಯಾತ್ರೆಗೆ ಮುನ್ನವೇ ಸುಸಜ್ಜಿತ ಹಜ್ ಭವನ ನಿರ್ಮಾಣ ಹಾಗೂ ನೇರ ವಿಮಾನ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ, ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಸಂಬಂಧಪಟ್ಟ ಸಚಿವರನ್ನು ನಿಯೋಗದ ಮೂಲಕ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಮಂಗಳೂರು ನಗರ ಕಾರ್ಯಾಧ್ಯಕ್ಷ ಅಶ್ರಫ್ ಅತ್ತೂರು, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಹಾಗೂ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕೀರ್ ಅಲಕ್ಕಿಮಜಲು ಉಪಸ್ಥಿತರಿದ್ದರು.