ಬಂಟ್ವಾಳ: ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ), ಕಲ್ಲಡ್ಕದ ಭರತನಾಟ್ಯ ವಿದ್ಯಾರ್ಥಿನಿ ಕುಮಾರಿ ಆತ್ಮಿ ಶೆಟ್ಟಿ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಏಪ್ರಿಲ್ 4ರಂದು ಸಂಜೆ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿದೆ ಎಂದು ನೃತ್ಯಗುರು ವಿದುಷಿ ವಿದ್ಯಾ ಮನೋಜ್ ತಿಳಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ್ಮಿ ಶೆಟ್ಟಿ ಕಳೆದ 12 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು, ಪ್ರಸ್ತುತ ವಿದ್ವತ್ ಅಂತಿಮ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಿದರು. ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಜನಮನ್ನಣೆ ಗಳಿಸಿರುವ ಉದಯೋನ್ಮುಖ ಕಲಾವಿದೆಯಾಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನೃತ್ಯಗುರು ಶಾಂತಲಾ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನ್ ಕುಮಾರ್, ಪುತ್ತೂರು ವಿಶ್ವಕಲಾನಿಕೇತನ ಸಂಸ್ಥೆಯ ನಿರ್ದೇಶಕಿ ವಿದುಷಿ ನಯನ ವಿ. ರೈ, ನೃತ್ಯಗಿರಿ ಮೈಸೂರು ಭರತನಾಟ್ಯ ಸಂಸ್ಥೆಯ ನಿರ್ದೇಶಕ ಡಾ. ಕೃಪಾ ಪಡ್ಕೆ, ಯಕ್ಷಧ್ರುವ ಪಟ್ಲ ಫೌಂಡೇಶನ್ನ ಪಟ್ಲ ಸತೀಶ್ ಶೆಟ್ಟಿ ಹಾಗೂ ಉದ್ಯಮಿ ಚಂದ್ರಹಾಸ ಡಿ. ಶೆಟ್ಟಿ ಭಾಗವಹಿಸಲಿದ್ದಾರೆ.
ಹಿಮ್ಮೇಳ ಕಲಾವಿದರಾಗಿ ನಟುವಾಂಗದಲ್ಲಿ ವಿದುಷಿ ವಿದ್ಯಾ ಮನೋಜ್, ಗಾಯನದಲ್ಲಿ ವಿದ್ವಾನ್ ನಂದಕುಮಾರ್ ಉನ್ನಿಕೃಷ್ಣನ್ (ಬೆಂಗಳೂರು), ಮೃದಂಗದಲ್ಲಿ ವಿದ್ವಾನ್ ಕಾರ್ತಿಕ್ ವೈದಾತ್ರಿ (ಬೆಂಗಳೂರು), ಕೊಳಲಿನಲ್ಲಿ ವಿದ್ವಾನ್ ನಿತೀಶ್ ಅಮ್ಮಣ್ಣಾಯ (ಬೆಂಗಳೂರು) ಹಾಗೂ ವೀಣೆಯಲ್ಲಿ ವಿದ್ವಾನ್ ಗೋಪಾಲ್ ವೆಂಕಟರಮಣ (ಬೆಂಗಳೂರು) ಸಹಕರಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಆತ್ಮಿ ಶೆಟ್ಟಿ, “ನನ್ನ ರಂಗಪ್ರವೇಶ ನನ್ನ ಪೋಷಕರ ಕನಸಾಗಿದ್ದು, ಗುರುಗಳ ಪ್ರೋತ್ಸಾಹ ಮತ್ತು ಪ್ರೇರಣೆಯಿಂದ ಈ ಹಂತಕ್ಕೆ ಬಂದಿದ್ದೇನೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉದಯ ಕುಮಾರ್ ಶೆಟ್ಟಿ, ಶಾಲಿನಿ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.