ಕಲಾಕೃತಿ ಗಳಿಂದ ಅಲಂಕೃತವಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ ವಿಮಾನ ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಇದು ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನ “ಟೇಲ್ಸ್ ಆಫ್ ಇಂಡಿಯಾ’ ಉಪಕ್ರಮದ ಭಾಗವಾಗಿದೆ.
ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನವಾಗಿ ಬೋಯಿಂಗ್ 737-8 (ವಿಟಿ-ಬಿ ಡಬ್ಲ್ಯುವಿ) ವಿಮಾನವನ್ನು ಫೈಯಿಂಗ್ ಕ್ಯಾನ್ ವಾಸ್ (ಹಾರಾಡುವ ಕಲಾಕೃತಿ) ಆಗಿ ನಿಯೋಜಿಸಲಾಗಿದೆ.
ಇದು ಸಾಂಪ್ರದಾಯಿಕ ಕಲೆಗಳನ್ನು ಆಧುನಿಕ ಶೈಲಿಯೊಂದಿಗೆ ಸಂಯೋಜಿಸಿ, ಪ್ರಯಾಣವನ್ನು ಒಂದು ಚಲಿಸುವ ಸಾಂಸ್ಕೃತಿಕ ಅನುಭವವನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.ಈ ವಿಮಾನ ಮಂಗಳೂರು – ಮುಂಬಯಿ ನಡುವೆ ಸಂಚರಿಸಿದ್ದು, ಲಿಯೊನಾರ್ಡೋ ಕ್ರಿಸ್ಟೋಫರ್ ಮುಖ್ಯ ಪೈಲಟ್ ಆಗಿ ಮತ್ತು ಲಿಯಾನ್ ವಾಸ್ ಸಹ-ಪೈಲಟ್ ಆಗಿ ಮುನ್ನಡೆಸಿದರು. ಕಲಾವಿದೆ ಓಶೀನ್ ಶಿವ ಅವರ ಕಲಾ ವಿನ್ಯಾಸ ಹೊಂದಿದ್ದು, ಭಾರತದ ಮೊಟ್ಟಮೊದಲ ಸಂಪೂರ್ಣ ಕಲಾಕೃತಿ ಯಿಂದ ಅಲಂಕರಿಸಲ್ಪಟ್ಟ ವಿಮಾನ ಇದಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಏರ್‌ಇಂಡಿಯಾ ಎಕ್ಸ್‌ಪ್ರೆಸ್ ತನ್ನ ವಿಮಾನಗಳ ಬಾಲದ ಭಾಗದಲ್ಲಿ ವಿವಿಧ ರಾಜ್ಯಗಳ ಜಾನಪದ ಕಲೆಗಳನ್ನು ಪ್ರದರ್ಶಿಸುತ್ತಿದೆ. ಈ ವಿಟಿ-ಬಿಡಬ್ಲ್ಯುವಿ ವಿಮಾನದ ಹೊರಭಾಗ ಕಲಾಮಯವಾಗಿರುವುದು ವಿಶೇಷವೆನಿಸಿದೆ.